ಕೊಡಗು(ಮಡಿಕೇರಿ): ಒಮಿಕ್ರಾನ್ ಭೀತಿ ಹಿನ್ನೆಲೆ ಕೊಡಗು ಜಿಲ್ಲೆಯ ಗಡಿಭಾಗಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ರೂಪಾಂತರಿ ವೈರಸ್ ಹಿನ್ನೆಲೆ ಪೋಷಕರು ವಿದ್ಯಾರ್ಥಿಗಳನ್ನ ಶಾಲೆಗಳಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಕೋವಿಡ್ ಪ್ರಕರಣಗಳ ಪ್ರಮಾಣ ಕಡಿಮೆಯಾಗಿತ್ತು. ಆದ್ರೆ, ಇದೀಗ ರೂಪಾಂತರಿ ಒಮಿಕ್ರಾನ್ ಜಿಲ್ಲೆಯ ಜನತೆಯಲ್ಲಿ ಮತ್ತೆ ಆತಂಕ ಮೂಡಿಸಿದೆ.
ಕೊಡಗು ಜಿಲ್ಲೆ ಅಂತಾರಾಜ್ಯ ಗಡಿಯನ್ನ ಹೊಂದಿಕೊಂಡಿದೆ. ಕುಟ, ಮಾಕುಟ್ಟ ಹಾಗೂ ಕರಿಕೆ ಗಡಿಯಲ್ಲಿ ಆರೋಗ್ಯ ಇಲಾಖೆ ಹದ್ದಿನ ಕಣ್ಣಿರಿಸಿದೆ. ದಿನದ 24 ಗಂಟೆಯೂ ಚೆಕ್ಪೋಸ್ಟ್ನಲ್ಲಿ ತಪಾಸಣೆ ನಡೆಯುತ್ತಿದೆ.
ಗಡಿಯಲ್ಲಿ ಹೈಅಲರ್ಟ್ : ಜಿಲ್ಲೆಯ ಜನತೆ ಹೆಚ್ಚಾಗಿ ನೆರೆಯ ಕೇರಳ ರಾಜ್ಯದೊಂದಿದೆ ಹೆಚ್ಚಿನ ವ್ಯವಹಾರ ನಡೆಸುತ್ತಾರೆ. ಜತೆಗೆ ಕೇರಳದಿಂದ ಕೊಡಗಿಗೆ ಸಾಕಷ್ಟು ಮಂದಿ ಆಗಮಿಸುತ್ತಾರೆ. ಹಾಗಾಗಿ, ಕೊಡಗಿನ 3 ಗಡಿಯಲ್ಲಿ ಹೈಅಲರ್ಟ್ ಮಾಡಲಾಗಿದೆ.
ಆರೋಗ್ಯ ಇಲಾಖೆ ಕೂಡ ಎಲ್ಲಾ ರೀತಿಯಲ್ಲೂ ಸಜ್ಜಾಗಿದೆ. ಸೂಕ್ತ ಮುಂಜಾಗ್ರತಾ ಕ್ರಮವಹಿಸಿದೆ. ತಮ್ಮ ಆರೋಗ್ಯ ಇಲಾಖೆ ಸಿಬ್ಬಂದಿಗೂ ಕೋವಿಡ್ ಟೆಸ್ಟ್ ನಡೆಸಿ ಅವರ ಆರೋಗ್ಯದ ಕಡೆಗೂ ಮುತುವರ್ಜಿ ವಹಿಸಲಾಗಿದೆ.
ಜಿಲ್ಲೆಯ ಶಾಲೆಯೊಂದರಲ್ಲಿ 9 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢಪಟ್ಟ ಬೆನ್ನಲ್ಲೇ ಪೋಷಕರು ಭೀತರಾಗಿದ್ದಾರೆ. ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಆದ್ರೆ, ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಎಲ್ಲಾ ರೀತಿಯ ಮುಂಜಾಗೃತಾ ಕ್ರಮಕೈಗೊಂಡಿದೆ. ಪೋಷಕರು ಹಾಗೂ ವಿದ್ಯಾರ್ಥಿಗಳು ಯಾವುದಕ್ಕೂ ಭಯ ಪಡುವ ಅಗತ್ಯ ಇಲ್ಲ ಎಂದು ಡಿಹೆಚ್ಒ ವೆಂಕಟೇಶ್ ಅಭಯ ನೀಡಿದ್ಧಾರೆ.
ಇದನ್ನೂ ಓದಿ: ಅಪರೂಪದ ತೀರ್ಪು.. 28 ದಿನದಲ್ಲಿ ಅತ್ಯಾಚಾರಿಗೆ ಮರಣದಂಡನೆ ಶಿಕ್ಷೆ