ಕೊಡಗು: ದುಡಿದ ಹಣ ಕೇಳಿದಕ್ಕೆ ಕಾರ್ಮಿಕನ ಮನೆ ಸುತ್ತ ಗುಂಡಿ ತೋಡಿಸಿ ಮಾಲೀಕ ಕಿರುಕುಳ ನೀಡಿದ್ದು, ಇದರಿಂದ ನೊಂದ ಕೂಲಿ ಕಾರ್ಮಿಕ ದಯಾ ಮರಣಕ್ಕೆ ಅರ್ಜಿ ಸಲ್ಲಿಸಿರುವ ಘಟನೆ ಜಿಲ್ಲೆಯ ವಿರಾಜಪೇಟೆ ಪೇಟೆ ತಾಲೂಕಿನ ಪಾಲಿಬೆಟ್ಟದಲ್ಲಿ ನಡೆದಿದೆ.
ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟದಲ್ಲಿ ತಮಿಳುನಾಡು ಮೂಲದ ಚೆಟ್ಟಿಯಾರ್ ಸಂಸ್ಥೆಯ ಒಡೆತನ 250 ಎಕರೆ ವಿಸ್ತಾರದ ಎಸ್ಟೇಟ್ ಇದೆ. ಇಲ್ಲಿ ಸುಬ್ರಮಣಿ ಎಂಬುವವರು ಕಳೆದ 25 ವರ್ಷಗಳಿಂದ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗಾಗಿ ಮಾಲೀಕ ವಸತಿ ಗೃಹ ನೀಡಿದ್ದಾನೆ. ಇದರ ನಡುವೆ ಹಣಕಾಸು ವಿಚಾರದಲ್ಲಿ ಎಸ್ಟೇಟ್ ಮಾಲೀಕ ಅಣ್ಣಾಮಲೈ ಮತ್ತು ಸುಬ್ರಮಣಿ ನಡುವೆ ಜಗಳ ಉಂಟಾಗಿ ಮನೆ ತೊರೆಯುವಂತೆ ಮಾಲೀಕ ಸುಬ್ರಮಣಿಗೆ ತಾಕೀತು ಮಾಡಿದ್ದಾನೆ. ಆದರೆ ತನಗೆ ಬರಬೇಕಿರುವ 12 ಲಕ್ಷ ರೂ. ಕೊಟ್ಟರೆ ಮನೆ ಬಿಡುತ್ತೇನೆ ಎಂದು ಕಾರ್ಮಿಕ ಸುಬ್ರಮಣಿ ಹಠ ಹಿಡಿದಿದ್ದಾರೆ.
ಇದರಿಂದ ಕೋಪಗೊಂಡ ಅಣ್ಣಾಮಲೈ, ಕಾರ್ಮಿಕ ವಾಸವಿರುವ ಮನೆಯ ಸುತ್ತ ರಾತ್ರೋರಾತ್ರಿ ಎರಡು ಜೆಸಿಬಿ ತಂದು 15 ಅಡಿ ಆಳದಲ್ಲಿ ಕಂದಕ ತೋಡಿಸಿದ್ದಾನೆ. ಅಷ್ಟೇ ಅಲ್ಲದೆ ಮನೆಗೆ ವಿದ್ಯುತ್ ಮತ್ತು ನೀರಿನ ಸಂಪರ್ಕ ಕೂಡ ಕಡಿತಗೊಳಿಸಿದ್ದಾನೆ. ಮನೆಗೆ ತೆರಳಲು ಎಸ್ಟೇಟ್ ಒಳಗೆ 2 ಕಿ.ಮೀ ಕ್ರಮಿಸಬೇಕಿದೆ. ಆದರೆ, ಸಾರ್ವಜನಿಕ ರಸ್ತೆಗೆ ಬೇಲಿ ಹಾಕಿಕೊಂಡಿರುವ ಎಸ್ಟೇಟ್ ಮಾಲೀಕರು ಮನೆಯವರನ್ನು ಎಸ್ಟೇಟ್ ಪ್ರವೇಶಿಸಲೂ ಬಿಡದೇ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ನೊಂದ ಕುಟುಂಬ ಎಸ್ಟೇಟ್ ಮ್ಯಾನೇಜರ್ ಅರಮಣಮಾಡ ರಂಜನ್ ಅವರನ್ನು ಸಂಪರ್ಕ ಮಾಡಿದೆ. ಆಗ ಹಣಕಾಸು ವ್ಯವಹಾರದಲ್ಲಿ ಭಿನ್ನಾಭಿಪ್ರಾಯ ಬಂದಿದೆ. ವಾಸ್ತು ಪ್ರಕಾರ ಕಟ್ಟಡ ಮರು ನಿರ್ಮಾಣಕ್ಕಾಗಿ ಕಂದಕ ತೋಡಲಾಗಿದೆ. ಸುಬ್ರಮಣ್ಯ ಅವರು ಮಾಡಿರುವ ಎಲ್ಲಾ ಆರೋಪಗಳನ್ನು ಮ್ಯಾನೇಜರ್ ತಳ್ಳಿ ಹಾಕಿದ್ದಾರಂತೆ. ಸದ್ಯ ಘಟನೆ ಸಂಬಂಧ ಸುಬ್ರಮಣಿ ಕುಟುಂಬ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.
ತನಗೆ ಸಿಗಬೇಕಾದ ಬೋನಸ್, ವೇತನ ಸೇರಿದಂತೆ ಅಂದಾಜು 12 ಲಕ್ಷ ರೂ. ಹಣ ತೋಟದ ಮಾಲೀಕರಿಂದ ಸಿಗಬೇಕು. ನ್ಯಾಯಾಲಯದಲ್ಲಿ ಈ ಬಗ್ಗೆ ದಾವೆ ಕೂಡ ಹೂಡಲಾಗಿದೆ. ಹೀಗಿರುವಾಗ ಏಕಾಏಕಿ ಮನೆಯ ಸುತ್ತಲೂ ಕಂದಕ ನಿರ್ಮಿಸಿ ನಿತ್ಯ ಕಿರುಕುಳ ನೀಡುತ್ತಿದ್ದಾರೆ. ಅನಾರೋಗ್ಯದಲ್ಲಿರುವ ಪತ್ನಿ, ಮಗಳ ಮುಖ ನೋಡಿ ಆತ್ಮಹತ್ಯೆಗೂ ಮನಸ್ಸು ಬರುತ್ತಿಲ್ಲ. ಹೀಗಾಗಿ ದಯಾಮರಣ ನೀಡಬೇಕೆಂದು ರಾಷ್ಟ್ರಪತಿಗಳಿಗೆ ಈ ಕುಟುಂಬ ಮನವಿ ಮಾಡಿದೆ.
ಇದನ್ನೂ ಓದಿ: ಬಾಕಿಯಿರುವ 12,909 ಕೋಟಿ ರೂ. ಜಿಎಸ್ಟಿ ಪರಿಹಾರ ಹಣ ಕೇಂದ್ರ ಪಾವತಿಸಲಿದೆ: ಬಸವರಾಜ ಬೊಮ್ಮಾಯಿ