ಕೊಡಗು: ಕೊರೊನಾದಿಂದ ಜೀವ ಉಳಿಸಿಕೊಳ್ಳಲು ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಬೇಕಿದೆ. ಈಗಾಗಲೇ ವಿಶ್ವದಾದ್ಯಂತ ಎರಡು ಲಕ್ಷಕ್ಕೂ ಅಧಿಕ ಮಂದಿ ಸೋಂಕಿತರು ಈ ಮಹಾಮಾರಿಗೆ ಬಲಿಯಾಗಿದ್ದು, ಜೀವ ಕಳೆದುಕೊಂಡ ಸಾವಿರಾರು ಸೋಂಕಿತರು ವೆಂಟಿಲೇಟರ್ ಲಭ್ಯವಾಗದೆ ಸಾವನ್ನಪ್ಪಿದ್ದಾರೆ ಎಂಬುದು ನಿಜಕ್ಕೂ ವಿಷಾದನೀಯ. ಕೃತಕ ಉಸಿರಾಟ ಕಲ್ಪಿಸಿ ಜೀವ ಉಳಿಸುವ ವೆಂಟಿಲೇಟರ್‌ಗಳನ್ನು ಎಲ್ಲಾ ದೇಶಗಳೂ ನಿಗದಿತ ಪ್ರಮಾಣದಲ್ಲಿ ಹೊಂದಿರುತ್ತವೆ. ಇವುಗಳ ಬೆಲೆಯೂ ದುಬಾರಿಯಾಗಿರುವುದರಿಂದ ಯಾವ ದೇಶವೂ ಹೆಚ್ಚು ದಾಸ್ತಾನು ಇರಿಸುವುದಿಲ್ಲ. ಆದರೆ ಕೋವಿಡ್-19 ವಿರುದ್ಧ ಹೋರಾಡಲು ವೆಂಟಿಲೇಟರ್‌ಗಳ ಅತ್ಯವಶ್ಯಕತೆ ಮನಗಂಡ ಕೊಡಗಿನ ವೈದ್ಯರೊಬ್ಬರು, ಕಡಿಮೆ ವೆಚ್ಚದ ವೆಂಟಿಲೇಟರ್ ಆವಿಷ್ಕಾರ ಮಾಡಿ ಗಮನ ಸೆಳೆದಿದ್ದಾರೆ.
ಮೂಲತಃ ಕೊಡಗು ಜಿಲ್ಲೆಯ ಸೋಮವಾರಪೇಟೆಯ ನಿವಾಸಿಯಾದ ಡಾ. ಕಿರಣ್ ಶೇಖರ್ ಎಂಬ ವೈದ್ಯ ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ಸೇವೆ ಸಲ್ಲಿಸುತ್ತಿದ್ದು, ಅವರ ನೇತೃತ್ವದ ತಜ್ಞರ ತಂಡ ಆವಿಷ್ಕರಿಸಿರುವ ಅಗ್ಗದ ವೆಂಟಿಲೇಟರ್‌ಗಳು ಆಸ್ಟ್ರೇಲಿಯಾದಲ್ಲಿ ಕೊರೊನಾ ಪೀಡಿತರ ಜೀವ ಉಳಿಸುವಲ್ಲಿ ನೆರವಾಗುತ್ತಿವೆ. ಡಾ. ಕಿರಣ್ ಶೇಖರ್ ಪ್ರಸ್ತುತ ಆಸ್ಟ್ರೇಲಿಯಾದ ಪ್ರಿನ್ಸ್ ಚಾರ್ಲಿಸ್ ಆಸ್ಪತ್ರೆಯಲ್ಲಿ ಸಂಶೋಧಕ ಮತ್ತು ತುರ್ತು ನಿಗಾ ಘಟಕ (ಐಸಿಯು)ದಲ್ಲಿ ಹಿರಿಯ ತಜ್ಞರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂಜಿನಿಯರ್ಗಳ ತಂಡದೊಂದಿಗೆ ಸೇರಿ ಕಡಿಮೆ ವೆಚ್ಚದಲ್ಲಿ ಕೊರೊನಾ ಸೋಂಕಿತರಿಗೆ ಕೃತಕ ಉಸಿರಾಟಕ್ಕೆ ಅವಕಾಶ ಕಲ್ಪಿಸುವ ವೆಂಟಿಲೇಟರ್‌ಗಳನ್ನು ಆವಿಷ್ಕರಿಸಿದ್ದಾರೆ.
'ಓಜಡ್ ವೇಡರ್' ಹೆಸರಿನ ಈ ವೆಂಟಿಲೇಟರ್ ಹಾಲಿ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿರುವ ವೆಂಟಿಲೇಟರ್‌ಗಳ ಬೆಲೆಗಿಂತ 10 ಪಟ್ಟು ಕಡಿಮೆ ದರದಲ್ಲಿ ಸಿಗಲಿದೆ. ಬ್ರಿಸ್ಟೇನ್ ಮೂಲಕ ಕಂಪೆನಿ ‘ಒಲಿಟಿಕ್’ನ ಜತೆಗೆ ಮೆಡಿಕಲ್ ಇಂಜಿನಿಯರಿಂಗ್ ರಿಸರ್ಚ್ ಫ್ಯಾಕಲ್ಟಿ (ಎಂಇಆರ್‌ಎಫ್), ಕ್ಯೂಸ್‍ಲ್ಯಾಂಡ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ (ಕ್ಯೂಯುಟಿ) ಸಹಯೋಗದೊಂದಿಗೆ ಇದನ್ನು ತಯಾರಿಸಲಾಗಿದ್ದು, ಕಡಿಮೆ ವೆಚ್ಚದ ವೆಂಟಿಲೇಟರ್ ನಿರ್ಮಾಣ ಮಾಡುವುದರ ಜತೆಗೆ ಹೆಚ್ಚಿನ ಸುರಕ್ಷತೆ ಕಾಯ್ದುಕೊಳ್ಳುವುದು ಸವಾಲಿನ ಕೆಲಸ.
ಅಭಿವೃದ್ಧಿಶೀಲ ರಾಷ್ಟ್ರಗಳು ಅಗ್ಗದ ಉಪಕರಣವನ್ನು ತ್ವರಿತವಾಗಿ ತಯಾರಿಸುವುದರಲ್ಲಿ ಮುಂದಿರುತ್ತವೆ ಎಂಬ ಮಾತಿದೆ. ಇದನ್ನು ಓಜಡ್ ವೇಡರ್ ಮಾಡಿ ತೋರಿಸಿದೆ. ಆ ಮೂಲಕ ದೇಶದಲ್ಲಿರುವ ಲಕ್ಷಾಂತರ ಬಡವರ ಪ್ರಾಣವನ್ನು ಉಳಿಸಲು ಸಹಕಾರಿಯಾಗಿದೆ ಎಂದು ಡಾ. ಕಿರಣ್ ಹೇಳುತ್ತಾರೆ. ಜಾಗತಿಕವಾಗಿ ಕಾಡುತ್ತಿರುವ ಕೊರೊನಾ ವೈರಸ್ ಪೀಡಿತ ರೋಗಿಗಳನ್ನು ಸಂರಕ್ಷಿಸಲು ಈ ವೆಂಟಿಲೇಟರ್‌ಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲಿವೆ. ಈಗ ಭಾರತದಲ್ಲೂ ಹಿಂದೂಜಾ ಸಮೂಹದ ಅಶೋಕ್ ಲೇಲ್ಯಾಂಡ್, ಮಹೀಂದ್ರಾ ಅಂಡ್ ಮಹೀಂದ್ರಾ ಮತ್ತು ಭಾರತೀಯ ರೈಲ್ವೆಯು ಅಗ್ಗದ ವೆಂಟಿಲೇಟರ್ ತಯಾರಿಕೆಗೆ ಮುಂದಾಗಿದ್ದು, ಇವು ಮುಂದಿನ ವರ್ಷ ಮಾರುಕಟ್ಟೆಗೆ ಬರಲಿವೆ ಎನ್ನಲಾಗಿದೆ.