ಮಡಿಕೇರಿ: ಇಟಲಿಯ ಅಂತಾರಾಷ್ಟ್ರೀಯ ಕಾಫಿ ಸಂಸ್ಥೆ 'ಇಲ್ಲಿಕಾಫೆ'ಯು ಉತ್ತಮ ಗುಣಮಟ್ಟದ ಕಾಫಿ ಉತ್ಪಾದಕರಿಗೆ ನೀಡುವ ವಾರ್ಷಿಕ 'ಅರ್ನೆಸ್ಟೊ ಇಲ್ಲಿ ಇಂಟರ್‌ನ್ಯಾಶನಲ್ ಕಾಫಿ ಅವಾರ್ಡ್- 2021' ರ ಪ್ರಶಸ್ತಿಗೆ ಮಾದಾಪುರ ಸಮೀಪದ ಜಂಬೂರು ಕಾಫಿ ಎಸ್ಟೇಟ್ ಭಾಜನವಾಗಿದೆ.
ಕಳೆದ 2016 ರಿಂದ ನೀಡಲಾಗುತ್ತಿರುವ ಪ್ರಶಸ್ತಿಯನ್ನು ಈ ವರ್ಷ ಟಾಟಾ ಕಾಫಿ ಲಿಮಿಟೆಡ್ನ ಜಂಬೂರು ಎಸ್ಟೇಟ್ ಪಡೆದುಕೊಂಡಿದೆ. ಕಳೆದ ಡಿಸೆಂಬರ್ 2 ರಂದು ಇಟಲಿಯಲ್ಲಿ ನಡೆದ ಗುಣಮಟ್ಟದ ಕಾಫಿ ಸ್ಪರ್ಧೆಯಲ್ಲಿ ಅತ್ಯುತ್ತಮ ಕಾಫಿ ಉತ್ಪಾದಿಸುವ 9 ರಾಷ್ಟ್ರಗಳ 17 ಮಂದಿ ಬೆಳೆಗಾರರು ಭಾಗವಹಿಸಿದ್ದರು. ಅಂತಾರಾಷ್ಟ್ರೀಯ ಪಾಕಶಾಸ್ತ್ರ ಮತ್ತು ಕಾಫಿ ತಜ್ಞರ ಸ್ವತಂತ್ರ ಸಮಿತಿಯು ಜಂಬೂರು ಎಸ್ಟೇಟ್‌ನ ಕಾಫಿಯನ್ನು 'ಬೆಸ್ಟ್ ಆಫ್ ದಿ ಬೆಸ್ಟ್' ಎಂದು ಗುರುತಿಸಿ, ಮೊದಲ ಸ್ಥಾನ ನೀಡಿದೆ. ಈ ಸ್ಪರ್ಧೆಯಲ್ಲಿ ಜಂಬೂರು ಎಸ್ಟೇಟ್ ಅನ್ನು ಬಿ.ಎಂ.ನಾಚಪ್ಪ ಪ್ರತಿನಿಧಿಸಿದ್ದರು.
ಅಂತಾರಾಷ್ಟ್ರೀಯ ಎರಡನೇ ಉನ್ನತ ಪ್ರಶಸ್ತಿಯಾದ "ಕಾಫಿ ಲವರ್ಸ್ ಚಾಯ್ಸ್" ಪ್ರಶಸ್ತಿಯನ್ನು ಗ್ವಾಟೆಮಾಲಾದ ಪ್ರೋಯೆಕ್ಟೊ ಲಿಫ್ಟ್ ಒಲೋಪಿಟಾ ಎಸ್ಟೇಟ್‌ಗೆ ನೀಡಲಾಯಿತು. ಈ ಸ್ಪರ್ಧೆಯಲ್ಲಿ ಬ್ರೆಜಿಲ್, ಕೊಲಂಬಿಯಾ, ಕೋಸ್ಟರಿಕಾ, ಎಲ್ ಸಾಲ್ವಡಾರ್, ಇಥಿಯೋಪಿಯಾ, ಗ್ವಾಟೆಮಾಲಾ, ಹೊಂಡುರಾಸ್, ಭಾರತ ಮತ್ತು ನಿಕರಾಗುವಾ ದೇಶದಿಂದ ತಲಾ ಮೂವರು ಬೆಳೆಗಾರರು ಭಾಗವಹಿಸಿದ್ದರು. ಭಾರತದಿಂದ ಚಿಕ್ಕಮಗಳೂರು ಜಿಲ್ಲೆಯ ಬಸ್ಕಲ್ ಎಸ್ಟೇಟ್‌ನ ಬಾಲರಾಜು ಮತ್ತು ಹಳ್ಳಿ ಹಿತ್ಲು ಎಸ್ಟೇಟ್‌ನ ಮಹೇಶ್ ಗೌಡ ಅವರು ಭಾಗವಹಿಸಿದ್ದರು.
ಜಂಬೂರು ಎಸ್ಟೇಟ್ ಸಮೃದ್ಧ ಸಾವಯವ ಮಣ್ಣಿನ ಪ್ರದೇಶ ಹೊಂದಿದ್ದು, ಸಮುದ್ರ ಮಟ್ಟದಿಂದ 950-1000 ಮೀಟರ್ ಎತ್ತರದಲ್ಲಿದೆ. 1,870 ರಲ್ಲಿ ಸ್ಥಾಪಿತವಾದ ಈ ಎಸ್ಟೇಟ್ 390 ಹೆಕ್ಟೇರ್ ಪ್ರದೇಶದಲ್ಲಿದ್ದು ಅರೇಬಿಕಾ ಕಾಫಿಯನ್ನು ಮಾತ್ರ ಬೆಳೆಯಲಾಗುತ್ತದೆ. ಈ ಎಸ್ಟೇಟ್‌ನಲ್ಲಿ "ಜಂಬೂರ್ ಗೋಲ್ಡ್" ಎಂಬ ಉತ್ತಮ ಗುಣಮಟ್ಟದ ಅರೇಬಿಕಾ ಕಾಫಿಯನ್ನು ಉತ್ಪಾದಿಸಲಾಗುತ್ತಿದೆ.
ಈ ವೇಳೆ ಮಾತನಾಡಿದ ಇಲ್ಲಿಕಾಫೆ ಅಧ್ಯಕ್ಷ ಆಂಡ್ರಿಯಾ ಇಲ್ಲಿ, ಅವರು ಭಾರತವು ಅರ್ನೆಸ್ಟೊ ಇಲ್ಲಿ ಇಂಟರ್‌ನ್ಯಾಶನಲ್ ಕಾಫಿ ಪ್ರಶಸ್ತಿಯನ್ನು ಗೆದ್ದಿರುವುದು ಇದೇ ಮೊದಲ ಬಾರಿ ಆಗಿದೆ. ಭಾರತದಲ್ಲಿ ಎತ್ತರದ ಮರಗಳ ನೆರಳಿನಡಿಯಲ್ಲಿ ಕಾಳುಮೆಣಸು, ಕಿತ್ತಳೆ , ವೆನಿಲ್ಲಾ, ಏಲಕ್ಕಿ ಮತ್ತು ದಾಲ್ಚಿನ್ನಿಯಂತಹ ಇತರೆ ಬೆಳೆಗಳೊಂದಿಗೆ ಕಾಫಿ ಬೆಳೆಯುವ ದೇಶವಾಗಿದೆ. ಮಿಶ್ರಬೆಳೆ ನಡುವೆಯೂ ಅತ್ಯುತ್ತಮ ಗುಣಮಟ್ಟದ ಕಾಫಿಯನ್ನು ಉತ್ಪಾದಿಸಲಾಗುತ್ತಿದೆ ಎಂದರು.
ಇಲ್ಲಿಕಾಫೆ ಎಂಬುದು ಇಟಾಲಿಯನ್ ಕೌಟುಂಬಿಕ ಸಂಸ್ಥೆಯಾಗಿದ್ದು, ಇದನ್ನು 1933 ರಲ್ಲಿ ಇಟಲಿಯ ಟ್ರಿಯೆಸ್ಟ್‌ನಲ್ಲಿ ಸ್ಥಾಪಿಸಲಾಯಿತು. ಇಲ್ಲಿ ವಿಶ್ವದ ಪ್ರಮುಖ ಜಾಗತಿಕ ಕಾಫಿ ಬ್ರಾಂಡ್ ಆಗಿದ್ದು, ಉತ್ಕೃಷ್ಟ ದರ್ಜೆಯ ಅರೇಬಿಕಾ ಕಾಫಿಯನ್ನು 140 ದೇಶಗಳಲ್ಲಿ ಕೆಫೆಗಳು, ರೆಸ್ಟೋರೆಂಟ್, ಹೋಟೆಲ್, ಕಚೇರಿ ಮತ್ತು ಮನೆಗಳಲ್ಲಿ ಮಾರಾಟ ಮಾಡುತ್ತಿದೆ.