ಕೊಡಗು: ಕಳೆದ ಕೆಲ ದಿನಗಳಿಂದ ನಿರಂತವಾಗಿ ಮಳೆ ಸುರಿಯುತ್ತಿದ್ದು, ವರುಣನ ಆರ್ಭಣಕ್ಕೆ ಇಬ್ಬರು ಬಲಿಯಾಗಿದ್ದಾರೆ. ತಡೆಗೋಡೆ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಭೂ ಕುಸಿತ ಉಂಟಾಗಿ ಲಾರಿ ಹಳ್ಳಕ್ಕೆ ಉರುಳಿರುವ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ.
ಮಳೆಯಿಂದಾಗಿ ಕಾಂಕ್ರಿಟ್ ತುಂಬಿದ್ದ ಲಾರಿ ಹಳ್ಳಕ್ಕೆ ಉರುಳಿದ್ದು, ಪರಿಣಾಮ ಅದರಲ್ಲಿದ್ದ ಇಬ್ಬರು ದುರ್ಮರಣಕ್ಕೀಡಾಗಿದ್ದಾರೆ. ಈ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಚೆರಂಬಾಣೆ ಬಳಿ ನಡೆದಿದೆ. ಹುಬ್ಬಳ್ಳಿ ಮೂಲದ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಚೆರಂಬಾಣೆಯ ಪಾಕ ಗ್ರಾಮದಲ್ಲಿ ಕಳೆದ ವರ್ಷ ಹೆಚ್ಚಿನ ಮಳೆ ಬಿದ್ದ ಪರಿಣಾಮ ಈ ಭಾಗದಲ್ಲಿ ಬೆಟ್ಟ-ಗುಡ್ಡಗಳು ಕುಸಿತವಾಗಿದ್ದವು. ಕಳೆದ ಬಾರಿ ಕುಸಿದ ಮಣ್ಣಿಗೆ ಈ ಬಾರಿ ತಡೆಗೋಡೆ ಕಟ್ಟಲಾಗುತ್ತಿತ್ತು. ಮಳೆ ಆರಂಭಕ್ಕೂ ಮೊದಲು ತಡೆಗೋಡೆ ಕಾರ್ಯ ಆರಂಭವಾಗಿತ್ತು. ಆದರೆ ಕಳೆದ ಕೆಲದಿನಗಳಿಂದ ಹೆಚ್ಚಿನ ಮಳೆ ಸುರಿಯುತ್ತಿದ್ದರೂ ತಡೆಗೋಡೆ ಕಾರ್ಯ ಮುಂದುವರೆದಿತ್ತು.
ಇದನ್ನೂ ಓದಿರಿ: ಸ್ಮಾರ್ಟ್ ಸಿಟಿ ಕಾಮಗಾರಿ ಗುಂಡಿಯಲ್ಲಿ ಬಿದ್ದ ವೃದ್ಧ: ಕುತ್ತಿಗೆಯಲ್ಲಿ ಕಬ್ಬಿಣದ ಸಲಾಕೆ ಹೊಕ್ಕು ಸಾವು
ಸ್ಥಳದಲ್ಲಿ ಕಾಂಕ್ರೀಟ್ ಲಾರಿಯಲ್ಲಿ ಮಿಕ್ಸ್ ಮಾಡಿ ಹಾಕುತ್ತಿದ್ದರು. ಆದರೆ ಏಕಾಏಕಿ ಮಣ್ಣು ಕುಸಿದ ಪರಿಣಾಮ ಲಾರಿ ಹಳ್ಳಕ್ಕೆ ಉರುಳಿದ್ದು, ಅದರಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ. ಕೂಲಿ ಹುಡುಕಿಕೊಂಡು ಹುಬ್ಬಳ್ಳಿಯಿಂದ ಬಂದಿದ್ದ ಕೂಲಿ ಕಾರ್ಮಿಕರು ಮೃತಪಟ್ಟಿದ್ದು, ಇವರ ಜೊತೆಯಲ್ಲಿ ಬಂದಿದ ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿತ್ತು. ಘಟನಾ ಸ್ಥಳಕ್ಕೆ ಭಾಗಮಂಡಲ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ತದನಂತರ ಪ್ರಕರಣ ದಾಖಸಿಕೊಂಡಿದ್ದಾರೆ.