ಮಡಿಕೇರಿ(ಕೊಡಗು): ಪ್ರಕೃತಿ ಸೌಂದರ್ಯದಿಂದ ಪ್ರವಾಸಿಗರನ್ನ ಆಕರ್ಷಿಸುತ್ತಿರುವ ಪ್ರವಾಸಿಗರ ಸ್ವರ್ಗ ಎಂದೇ ಕರೆಯುವ ಕೊಡಗು ಜಿಲ್ಲೆಯಲ್ಲಿ ಮತ್ತೊಂದು ಸಾಕಾನೆ ಶಿಬಿರ ಆರಂಭವಾಗುತ್ತಿರುವುದು ಟೂರಿಸ್ಟ್ಗಳಿಗೆ ಮತ್ತು ಸ್ಥಳೀಯರಿಗೆ ಹರ್ಷ ತಂದಿದೆ. ಹಾರಂಗಿ ಡ್ಯಾಮ್ ಪಕ್ಕದಲ್ಲಿ ಸಾಕಾನೆ ಶಿಬಿರ ನಿರ್ಮಾಣವಾಗುತ್ತಿದ್ದು, ಸಿದ್ಧತೆ ಕಾರ್ಯ ಶುರುವಾಗಿದೆ. ರಾಜ್ಯದಲ್ಲಿ ಮತ್ತೊಂದು ಸಾಕಾನೆ ಶಿಬಿರ ಆರಂಭವಾಗುತ್ತಿದೆ.
ಕೊಡಗಿನ ಹಾರಂಗಿ ಜಲಾಶಯ ಬಳಿ ಮೊದಲ ಹಂತದಲ್ಲಿ 70 ಲಕ್ಷ ರೂ. ವೆಚ್ಚದಲ್ಲಿ ತಲೆ ಎತ್ತಲಿರುವ ಈ ಶಿಬಿರಕ್ಕೆ ಸಂಬಂಧಿಸಿದ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಪ್ರವಾಸಿಗರನ್ನು ನಂಬಿ ಜೀವನ ನಡೆಸುತ್ತಿರುವ ವ್ಯಾಪಾರಸ್ಥರಿಗೆ ಸಂತಸ ತಂದಿದೆ. ಕೊಡಗಿನಲ್ಲಿ ಇದು ಮೂರನೇ ಸಾಕಾನೆ ಶಿಬಿರವಾಗಲಿದೆ. ದುಬಾರೆ, ಮತ್ತಿಗೋಡು ಶಿಬಿರದಲ್ಲಿ ಆನೆಗಳನ್ನು ಪಳಗಿಸಿ ಸಾಕುತ್ತಿದ್ದು, ಆನೆಗಳನ್ನು ನೋಡಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಇದೀಗ ಮತ್ತೊಂದು ಆನೆ ಶಿಬಿರ ಮಾಡುತ್ತಿರುವುದು ಪ್ರವಾಸಿಗರಿಗೆ ಮತ್ತಷ್ಟು ಅನುಕೂಲವಾಗಲಿದೆ.
ಕೊಡಗಿನಲ್ಲಿ ಕಾಡಾನೆಗಳ ಕಾಟ ಹೆಚ್ಚಾಗಿದ್ದು, ದಾಂಧಲೆ ಮಾಡುವ ಕಾಡಾನೆಗಳನ್ನು ಹಿಡಿದು ಇಲ್ಲಿ ಪಳಗಿಸಲು ಸಹಾಕಾರಿಯಾಗಿದೆ. ಅಲ್ಲದೇ, ಜಿಲ್ಲೆಯಲ್ಲಿರುವ ಸಾಕಾನೆ ಶಿಬಿರಗಳಲ್ಲಿ ಆನೆಗಳು ಹೆಚ್ಚಾಗಿದ್ದು, ಒಂದೇ ಜಾಗದಲ್ಲಿ ಅಷ್ಟು ಆನೆಗಳನ್ನು ಸಾಕಲು ಕಷ್ಟವಾಗಿತ್ತು. ಒಂದು ಶಿಬಿರದಲ್ಲಿ 15ಕ್ಕೂ ಹೆಚ್ಚು ಆನೆಗಳು ಇರುವಂತಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದೆ. ಇದೀಗ ಮತೊಂದು ಸಾಕಾನೆ ಶಿಬಿರವಾಗುತ್ತಿರುವುದು ಸಂತೋಷದ ವಿಷಯವಾಗಿದೆ.
ದುಬಾರೆ ಸಾಕಾನೆ ಶಿಬಿರದಲ್ಲಿ ಪ್ರಸ್ತುತ ಇರುವ ಆನೆಗಳ ಪೈಕಿ ಅರ್ಧದಷ್ಟು ಆನೆಗಳನ್ನು ಹಾರಂಗಿ ಆನೆ ಶಿಬಿರಕ್ಕೆ ಸ್ಥಳಾಂತರಿಸಿದರೆ ದುಬಾರೆ ಶಿಬಿರದ ಮೇಲಿರುವ ಒತ್ತಡ ಕಡಿಮೆ ಆಗಲಿದೆ. ಹಾರಂಗಿ ಹಿನ್ನೀರು ಪ್ರದೇಶದಲ್ಲಿ ಟ್ರೀ ಪಾರ್ಕ್ ನಿರ್ಮಾಣ ಕಾರ್ಯ ನಡೆದಿದ್ದು, ಇಲ್ಲಿಯೇ ಸಾಕಾನೆ ಶಿಬಿರ ತಲೆಯೆತ್ತಲಿದೆ. ಟ್ರೀ ಪಾರ್ಕ್ ಮತ್ತು ಆನೆ ಶಿಬಿರ ಇಲ್ಲಿ ಆರಂಭವಾದ ನಂತರ ಕೊಡಗಿನ ಪ್ರವಾಸಿ ತಾಣಗಳ ಪಟ್ಟಿಗೆ ಮತ್ತೆ ಎರಡು ಸ್ಥಳಗಳು ಸೇರ್ಪಡೆ ಆಗಲಿವೆ. ಹಾರಂಗಿಯ ಆಕರ್ಷಣೆಯೂ ಹೆಚ್ಚಲಿದೆ.
ರಾಜ್ಯದ ಸಾಕಾನೆ ಶಿಬಿರಗಳಲ್ಲಿ ಆನೆಗಳ ಅಸ್ವಾಭಾವಿಕ ಸಾವಿನ ಬಗ್ಗೆ ತನಿಖೆ ನಡೆಸಲು ರಚನೆಯಾಗಿದ್ದ ತಜ್ಞರ ಸಮಿತಿ ಕುಶಾಲನಗರ ತಾಲೂಕು ದುಬಾರೆ ಸಾಕಾನೆ ಶಿಬಿರಕ್ಕೆ ಭೇಟಿ ನೀಡಿದ್ದ ವೇಳೆ ಇಲ್ಲಿ ಮರಿಗಳು ಸೇರಿದಂತೆ 32 ಆನೆಗಳು ಇರುವುದನ್ನು ಗಮನಿಸಿ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಸಂಬಂಧ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ದಾಖಲಿಸಿದ್ದಲ್ಲದೇ, ಒಂದು ಶಿಬಿರದಲ್ಲಿ 15ಕ್ಕೂ ಹೆಚ್ಚು ಆನೆಗಳು ಇರುವಂತಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕುಶಾಲನಗರ ಅರಣ್ಯ ಅತ್ತೂರು ಶಾಖೆಗೆ ಸೇರಿದ ಹಾರಂಗಿ ಟ್ರೀ ಪಾರ್ಕ್ ಬಳಿ ಹೊಸ ಸಾಕಾನೆ ಶಿಬಿರ ಆರಂಭಿಸಲು 2021ರ ಫೆಬ್ರುವರಿ 12ಕ್ಕೆ ಸರ್ಕಾರ ಅನುಮತಿ ನೀಡಿದೆ. 40 ಎಕರೆ ಪ್ರದೇಶದಲ್ಲಿ ಟ್ರೀ ಪಾರ್ಕ್ ಇದ್ದು, ಈ ಪೈಕಿ ಸುಮಾರು 15 ಎಕರೆ ಪ್ರದೇಶವನ್ನು ಸಾಕಾನೆ ಶಿಬಿರಕ್ಕೆ ಬಳಸಿಕೊಳ್ಳಲು ಅರಣ್ಯ ಇಲಾಖೆ ಯೋಜನೆ ರೂಪಿಸಿದೆ.
ಆರಂಭದಲ್ಲಿ ಮಾವುತರು, ಕಾವಾಡಿಗಳಿಗೆ ಉಳಿದುಕೊಳ್ಳಲು ವಸತಿ ಗೃಹಗಳು, ಸ್ಟೋರ್ ರೂಂ, ಆನೆಗಳಿಗೆ ಆಹಾರ ತಿನ್ನಿಸುವ ಪ್ರದೇಶ, ಔಷಧ ಒದಗಿಸುವ ಪ್ರದೇಶ. ಈ ರೀತಿಯ ಮೂಲ ಅಗತ್ಯದ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ.
ಇದನ್ನೂ ಓದಿ: Watch Video : ಕೇರಳ ರಸ್ತೆ ಸಾರಿಗೆ ಬಸ್‌ಗೆ ಎದುರಾದ ಒಂಟಿ ಸಲಗ : ಮಾಡಿದ್ದೇನು ಗೊತ್ತಾ?