ಕೊಡಗು: ಆಡಬಾರದ್ದನ್ನು ಆಡಿದ್ರೆ ಕೇಳಬಾರದ್ದನ್ನು ಕೇಳಬೇಕಾಗುತ್ತೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಹೇಳಿದರು.
ತಾಲೂಕಿನ ನಪೋಕ್ಲು ಕೊಡವ ಸಮಾಜದಲ್ಲಿ ವಿದ್ಯಾರ್ಥಿಗಳೊಂದಿಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್ ಎಸ್ ದೊರೆಸ್ವಾಮಿ ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ಅವರು ಶತಾಯುಷಿ, ಅವರ ಬಗ್ಗೆ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವಹೇಳನಕಾರಿಯಾಗಿ ಮಾತನಾಡಿರುವುದು ಸರಿಯಲ್ಲ ಎಂದಿದ್ದಾರೆ.
ದೊರೆಸ್ವಾಮಿ ಅವರು ಕೂಡ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಲಘುವಾಗಿ ಮಾತನಾಡಬಾರದಿತ್ತು. ಏನಾದರೂ ಮಾತನಾಡುವಾಗ ವಿವೇಚನೆಯಿಂದ ಮಾತನಾಡಬೇಕು ಹಾಗೂ ಹೇಳಿಕೆ ನೀಡುವಾಗ ಬಹಳ ಎಚ್ಚರಿಕೆಯಿಂದಿರಬೇಕು. ಹೀಗೆ ಆಡಬಾರದ್ದನ್ನು ಆಡಿದ್ರೆ ಕೇಳಬಾರದ್ದನ್ನು ಕೇಳಬೇಕಾಗುತ್ತೆ ಎಂದು ಇಬ್ಬರಿಗೂ ಚಾಟಿ ಬೀಸಿದರು.
ಕುಶಾಲನಗರದ ಟಿಬೆಟಿಯನ್ ಕ್ಯಾಂಪ್ ಶಾಲೆಗಳಲ್ಲಿ 6ನೇ ತರಗತಿಯಿಂದ ಮಾತೃ ಭಾಷೆ ಕನ್ನಡ ಕಲಿಕೆಗೆ ಅವಕಾಶ ಕಲ್ಪಿಸುವಂತೆ ಮಾಡಿದ್ದಾರೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಲ್ಲಿ ಒಂದನೇ ತರಗತಿಯಿಂದ ಮಾತೃಭಾಷೆ ಕನ್ನಡ ಕಲಿಕೆ ಕಡ್ಡಾಯವಾಗಿದೆ. ಕನ್ನಡವನ್ನು ರಾಜ್ಯದ ಎಲ್ಲ ಸಿಬಿಎಸ್‌ಸಿ ಹಾಗೂ ಐಸಿಎಸ್ಸಿ ಶಾಲೆಗಳಲ್ಲಿ ಕಲಿಸಬೇಕೆಂಬ ಕಾನೂನಿದೆ. ಆ ನಿಯಮವನ್ನು ನೀವೂ ಕೂಡಾ ಪಾಲಿಸಬೇಕು ಎಂದು ಸಿಬಿಎಸ್‌ಸಿ ಶಾಲೆಗಳಿಗೆ ಲಿಖಿತ ರೂಪದಲ್ಲಿ ಸೂಚನೆ ನೀಡಿದ್ದೇನೆ ಎಂದರು.