ಮಡಿಕೇರಿ(ಕೊಡಗು): ಜಿಲ್ಲೆಯಲ್ಲಿ ದಿನೇ ದಿನೆ ಕೊರೊನಾ ವೈರಸ್ ಹಾವಳಿ ಹೆಚ್ಚುತ್ತಿದೆ. ಇಂದು 416 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಒಂದೇ ಜಾಗದಲ್ಲಿ ಕೆಲಸಮಾಡುವ ಕಾರ್ಮಿಕರಿಗೆ ವೈರಸ್ ಹರಡುತ್ತಿದೆ. ಈ ಸೋಂಕು ಜನರಲ್ಲಿ ಆತಂಕ ಮೂಡಿಸಿರುವಂತೆಯೇ ಕೊರೊನಾ ಪಾಸಿಟಿವ್ ಬಂದ ಮೂವರು ಕಾರ್ಮಿಕರು ತಪ್ಪಿಸಿಕೊಂಡಿದ್ದಾರೆ.
ಮಡಿಕೇರಿಯ ರಾಜಾಸೀಟು ಪಕ್ಕದಲ್ಲಿರುವ ಒಂದು ಕಟ್ಟಡದಲ್ಲಿ ಕೆಲಸಮಾಡುತ್ತಿದ್ದ 60 ಕ್ಕೂ ಹೆಚ್ಚು ಕಾರ್ಮಿಕರಿಗೆ ಪಾಸಿಟಿವ್ ಕಾಣಿಸಿಕೊಂಡಿತ್ತು. ವೈದ್ಯರು ಭೇಟಿ ಮಾಡಿ ಎಲ್ಲಾ ಸೋಂಕಿತರನ್ನು ಒಂದೇ ಕಟ್ಟಡದಲ್ಲಿ ಕೂಡಿ ಹಾಕಿ ಚಿಕಿತ್ಸೆ ಕೊಡುತ್ತಿದ್ದರು. ಆದರೆ, ಸೀಲ್ಡೌನ್ ಆದ ಕಟ್ಟಡದಿಂದ ಈಗ ಮೂವರು ಕಾರ್ಮಿಕರು ತಪ್ಪಿಸಿಕೊಂಡಿದ್ದಾರೆ. ಇದು ಆರೋಗ್ಯ ಇಲಾಖೆಗೆ ತಲೆನೋವು ತರಿಸಿದೆ.
ಕ್ವಾರಂಟೈನ್ ಕೇಂದ್ರದಿಂದ ತಪ್ಪಿಸಿಕೊಂಡ ಕಾರ್ಮಿಕರು!
ಇಂದು ಬೆಳಗ್ಗೆ ಕಟ್ಟಡದಿಂದ ಹೊರಹೋದ ಮೂವರು ಕಾರ್ಮಿಕರು ವಾಪಸ್ ಬಂದಿಲ್ಲ. ಕರೆ ಮಾಡಿದಾಗ ಪುತ್ತೂರಿನಲ್ಲಿದ್ದೇವೆ ಎಂದು ಹೇಳಿದ್ದಾರೆ. ಉಳಿದ ಎಲ್ಲಾ ಕಾರ್ಮಿಕರು ಕಟ್ಟಡದಲ್ಲಿ ಕ್ವಾರಂಟೈನ್ ಆಗಿದ್ದಾರೆ. ಆದರೆ, ಮೂವರು ಮಾತ್ರ ತಪ್ಪಿಸಿಕೊಂಡಿದ್ದಾರೆ. ಕೊರೊನಾ ಇದ್ರೂ ಬಸ್ನಲ್ಲಿ ಜನರ ನಡುವೆ ಬಿಂದಾಸ್ ಆಗಿ ಓಡಾಟ ಮಾಡುತ್ತಿದ್ದಾರೆ. ಪಾಸಿಟಿವ್ ಬಂದಿರುವ ಕಾರ್ಮಿಕರು ಪಟ್ಟಣಕ್ಕೆ ಹೋಗಿ ಬರುತ್ತಿದ್ದು, ಹೆಸರಿಗೆ ಮಾತ್ರ ಕಟ್ಟಡ ಸೀಲ್ಡೌನ್ ಎಂದು ಹೇಳುತ್ತಿದ್ದಾರೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಥಳಕ್ಕೆ ಆರೋಗ್ಯಾಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ಮಾಡಿದ್ದಾರೆ. ಮೂವರ ಮೇಲೂ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಕಟ್ಟಡದಲ್ಲಿ ಕೆಲಸ ಮಾಡಿದ್ದ ಕಾರ್ಮಿಕರಲ್ಲಿ ರೋಗ ಲಕ್ಷಣಗಳು ಕಂಡು ಬರುವ ಎಲ್ಲರಿಗೂ ಟೆಸ್ಟ್ ಮಾಡಲು ವೈದ್ಯರು ಮುಂದಾಗಿದ್ದಾರೆ.
ಓದಿ: ವೀಕೆಂಡ್ ಕರ್ಫ್ಯೂ ವಿರುದ್ಧ ಬಿಜೆಪಿ ನಾಯಕರ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ: ಕಟೀಲ್