ಕೊಡಗು: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಈ ಹಿಂದೆ ನೀಡಿರುವ ಹೇಳಿಕೆಗಳೇ ಅವರ ಕಾರಿನ ಮೇಲೆ ಮೊಟ್ಟೆ ಎಸೆಯಲು ಕಾರಣ ಎಂದು ಕಾರಿಗೆ ಮೊಟ್ಟೆ ಎಸೆದಿರುವ ಆರೋಪಿ ಸೋಮವಾರಪೇಟೆಯ ಸಂಪತ್ ಹೇಳಿರುವ ವಿಡಿಯೋ ವೈರಲ್ ಆಗುತ್ತಿದೆ. ಅಲ್ಲದೆ, ಆತ ತಾನು ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿಕೊಂಡಿರುವುದು ಈ ವಿಡಿಯೋದಲ್ಲಿದೆ.
ಮೊಟ್ಟೆ ಎಸೆತ ಘಟನೆ ಬಳಿಕ ಕಾಂಗ್ರೆಸ್ ಹಾಗೂ ಬಿಜೆಪಿಯವರು ಪರಸ್ಪರ ಆರೋಪದಲ್ಲಿ ತೊಡಗಿದ್ದಾರೆ. ಸಂಪತ್ ಆರ್ಎಸ್ಎಸ್ ಹಾಗೂ ಬಿಜೆಪಿ ನಾಯಕರ ಜೊತೆಗಿನ ಫೋಟೊ ಹಂಚಿಕೊಂಡು ಟ್ವೀಟ್ ಮೂಲಕ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿಯವರು ಸಂಪತ್ ನೀಡಿರುವ ಹೇಳಿಕೆಯೆ ವಿಡಿಯೋಗಳನ್ನು ಟ್ವೀಟ್ಗೆ ಬಳಸಿಕೊಂಡಿದ್ದಾರೆ. ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ಬಿಜೆಪಿ ನಾಯಕರು ಸಂಪತ್ ಹೇಳಿಕೆ ಜೊತೆಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಭಾವನೆಗೆ ಧಕ್ಕೆ: 'ಈ ಹಿಂದೆ ಸಿದ್ದರಾಮಯ್ಯ ಕೊಡಗಿನವರು ದನದ ಮಾಂಸ ಭಕ್ಷಣೆ ಮಾಡುತ್ತಾರೆಂದು ಹೇಳಿದ್ದರು. ಆದರೆ ಎಲ್ಲರೂ ಕೂಡ ಗೋಮಾಂಸ ಸೇವಿಸುತ್ತಾರೆ ಎಂದು ಹೇಳುವುದು ತಪ್ಪು. ಅಲ್ಲದೆ, ಟಿಪ್ಪು ವಿಚಾರದಲ್ಲಿ ಕೊಡಗಿನ ಜನರ ಭಾವನೆಗೆ ಧಕ್ಕೆ ತಂದಿದ್ದಾರೆ. ಇದೆಲ್ಲ ನನಗೆ ಇಷ್ಟವಾಗಿಲ್ಲ, ಹೀಗಾಗಿಯೇ ಅವರ ಕಾರಿಗೆ ಮೊಟ್ಟೆ ಎಸೆದಿದ್ದೇನೆ' ಎಂದು ಸಂಪತ್ ವಿಡಿಯೋದಲ್ಲಿ ಹೇಳಿದ್ದಾರೆ.
'ಸಿದ್ದರಾಮಯ್ಯ ಭೇಟಿ ವೇಳೆ ಮೊಟ್ಟೆ ಎಸೆಯುವ ಉದ್ದೇಶದಿಂದಲೇ ನಾನು ಅಲ್ಲಿಗೆ ಬಂದಿರಲಿಲ್ಲ. ವೈಯಕ್ತಿಕ ಕೆಲಸಕ್ಕೆ ಬಂದಿದ್ದ ನಾನು ಅಲ್ಲಿಗೆ ಊಟಕ್ಕೆಂದು ಹೋಗಿದ್ದೆ. ಆಗ ಆಗಮಿಸಿದ ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದಿದ್ದೇನೆ. ನಾನು ಈ ಹಿಂದೆ ಜೆಡಿಎಸ್ ಕಾರ್ಯಕರ್ತನಾಗಿದ್ದೆ. ಆದರೆ, ಮಾಜಿ ಸಚಿವ ಜೀವಿಜಯ ಕಾಂಗ್ರೆಸ್ ಸೇರ್ಪಡೆಯಾದರು. ಇದರಿಂದ ನಾನು ಕಾಂಗ್ರೆಸ್ಗೆ ಬಂದಿದ್ದೇನೆ' ಎಂದೂ ಸಹ ಸಂಪತ್ ಹೇಳಿದ್ದಾರೆ.
ಗುರುವಾರ ಕೊಡಗು ಜಿಲ್ಲಾ ಪ್ರವಾಸ ಕೈಗೊಂಡಿದ್ದ ನಾಯಕ ಸಿದ್ದರಾಮಯ್ಯ ಅವರಿಗೆ ಗಡಿ ಭಾಗದಲ್ಲಿಯೇ ಕಹಿ ಅನುಭವ ಆಗಿತ್ತು. ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಗೋ ಬ್ಯಾಕ್ ಸಿದ್ದರಾಮಯ್ಯ ಘೋಷಣೆ ಕೂಗಿದ್ದರು. ಇದೇ ವೇಳೆ ಅವರ ಕಾರಿನ ಮೇಲೆ ಮೊಟ್ಟೆ ಎಸೆಯಲಾಗಿತ್ತು.
ಕಾಂಗ್ರೆಸ್ ದೂರು: ಈ ಮಧ್ಯೆ ಸಿದ್ದರಾಮಯ್ಯರ ಕಾರಿಗೆ ಮೊಟ್ಟೆ ಎಸೆದ ಪ್ರಕರಣ ಸಂಬಂಧ ಹಿಂದೂ ಸಂಘಟನೆಗಳ 9 ಮಂದಿ ವಿರುದ್ದ ಕಾಂಗ್ರೆಸ್ ಮುಖಂಡ ಪ್ರಕಾಶ್ ಆಚಾರ್ಯ ಮಡಿಕೇರಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಂತೆ 9 ಬಿಜೆಪಿ ಹಿಂದೂಪರ ಸಂಘಟನೆ ಕಾರ್ಯಕರ್ತರ ಮೇಲೆ ಎಫ್‌ಐಆರ್ ದಾಖಲಾಗಿದೆ. ದೂರಿನ ಮೇರೆಗೆ ಎಲ್ಲರೂ ಮಡಿಕೇರಿ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ಮಡಿಕೇರಿ ನಗರ ಪೊಲೀಸ್ ಠಾಣೆಯ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಇದನ್ನೂ ಓದಿ: ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿಗೆ ಬಿಜೆಪಿಗರಿಂದ ಮೊಟ್ಟೆ ಎಸೆತ, ಕಪ್ಪು ಬಾವುಟ ಪ್ರದರ್ಶನ