ಕೊಪ್ಪಳ: ಜಿಲ್ಲೆಯಲ್ಲಿ ಇಂದು ಮಹಿಳೆಯೊಬ್ಬರಿಗೆ ಸೋಂಕು ತಗುಲಿರುವುದು ದೃಢವಾಗಿದೆ. ಸೋಂಕಿತ ಮಹಿಳೆಯು ಬಳ್ಳಾರಿ ಜಿಲ್ಲೆಗೆ ಭೇಟಿ ನೀಡಿ ಬಂದಿರೋದು ಹಾಗೂ ಮಹಿಳೆಯ ಪತಿ ಆಟೋ ಚಾಲಕನಾಗಿದ್ದರಿಂದ ಇವರ ಟ್ರಾವೆಲ್ ಹಿಸ್ಟರಿ ಆತಂಕಕ್ಕೆ ಕಾರಣವಾಗಿದೆ. ಹಾಗಾಗಿ ಮಹಿಳೆಯ ಟ್ರಾವೆಲ್ ಹಿಸ್ಟರಿ ಕಲೆ ಹಾಕಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಂಕಿತ (28 ವರ್ಷ) ಮಹಿಳೆಯನ್ನು ಕೊಪ್ಪಳದ ಕೋವಿಡ್ -19 ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆಯು ಬಳ್ಳಾರಿ ಜಿಲ್ಲೆಗೆ ಹೋಗಿ ಬಂದಿರುವ ಮಾಹಿತಿ ಇದೆ. ಅಲ್ಲದೆ ಈಕೆಯ ಪತಿ ಆಟೋ ಚಾಲಕನಾಗಿದ್ದು, ಕಂಪ್ಲಿಗೂ ಅವರು ಹೋಗಿ ಬಂದ ಮಾಹಿತಿ ಇದೆ. ಈಗ ಸದ್ಯಕ್ಕೆ 11 ಜನ ಪ್ರಾಥಮಿಕ ಹಾಗೂ 10 ಜನ ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಲಾಗಿದೆ. ಅವರ ಟ್ರಾವೆಲ್ ಹಿಸ್ಟರಿ ಕುರಿತು ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಅವರು ಸರಿಯಾಗಿ ಮಾಹಿತಿ ನೀಡದ ಕಾರಣ ಸಂಪರ್ಕಿತರ ಪತ್ತೆ ಕಾರ್ಯ ಇನ್ನೂ ನಡೆಯುತ್ತಿದೆ. ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ P-2254 ಗುಣಮುಖರಾಗಿದ್ದು, ಅವರನ್ನು ಆಸ್ಪತ್ರೆಯಿಂದ ಇಂದು ಬಿಡುಗಡೆ ಮಾಡಲಾಗುತ್ತಿದೆ ಎಂದರು.