ಕೊಡಗು: ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದೆ. ಇಂದು ಒಂದೇ ದಿನ 26 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗುವ ಮೂಲಕ ಕೊಡಗಿನ ಜನತೆಗೆ ಆತಂಕ ಉಂಟುಮಾಡಿದೆ.
8 ತಿಂಗಳ ಮಗು, 9 ವರ್ಷದ ಬಾಲಕ ಮತ್ತು ಆರೋಗ್ಯ ಕಾರ್ಯಕರ್ತರು ಸೇರಿದಂತೆ ಒಟ್ಟು 26 ಜನರಿಗೆ ಕೊರೊನಾ ದೃಢವಾಗುವ ಮೂಲಕ ಜಿಲ್ಲೆಯಲ್ಲಿ ಈಗ ಕೊರೊನಾ ಶತಕದ ಗಡಿ ದಾಟಿದೆ.
ಕಕ್ಕಬ್ಬೆ, ಕಿರುಂದಾಡು, ಪಾರಾಣೆ, ಸಂಪಾಜೆ, ಕುಟ್ಟ, ಕೈಕಾಡು, ಬಾವಲಿ, ಕುದುರೆಪಾಯ ತಣ್ಣಿಮಾನಿ, ಸಣ್ಣಪುಲಿಕೋಟು ಸೇರಿದಂತೆ ಹಲವು ಹಳ್ಳಿಗಳಿಗೂ ಮಹಾಮಾರಿ ಹಬ್ಬಿದೆ. ಕಾವೇರಿ ಉಗಮಸ್ಥಾನ ತಲಕಾವೇರಿ, ಭಗಂಡೇಶ್ವರ ನೆಲೆಸಿರುವ ಬಾಗಮಂಡಲ ಸೇರಿದಂತೆ ಹಲವು ಪ್ರಮುಖ ಗ್ರಾಮಗಳಿಗೂ ಕೊರೊನಾ ನುಗ್ಗಿದೆ.
ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 122 ಪ್ರಕರಣಗಳು ದಾಖಲಾಗಿದ್ದು, 16 ಜನರು ಗುಣಮುಖರಾಗಿದ್ದರೆ, 105 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚುತ್ತಿದ್ದು, ಕಂಟೇನ್ಮೆಂಟ್ ಝೋನ್‍ಗಳು ಬರೋಬ್ಬರಿ 58ಕ್ಕೆ ಏರಿಕೆಯಾಗಿವೆ. ರೆಸಾರ್ಟ್‍ಗಳ ಸಿಬ್ಬಂದಿಗೂ ಕೊರೊನಾ ತಗುಲಿದ್ದು, ಆರೋಗ್ಯ ಕಾರ್ಯಕರ್ತರಿಗೆ ದಿನದಿಂದ ದಿನಕ್ಕೆ ಮಹಾಮಾರಿ ಸುತ್ತಿಕೊಳ್ಳುತ್ತಲೇ ಇದೆ.
ಒಟ್ಟಿನಲ್ಲಿ ಕೊಡಗಿನಲ್ಲಿ ಕೆಲವು ದಿನಗಳಿಂದ ನಿರಂತರವಾಗಿ ಮಹಾಮಾರಿ ಉಲ್ಬಣಗೊಳ್ಳುತ್ತಿದ್ದು, ಜನರು ಆತಂಕಕ್ಕೆ ಒಳಗಾಗುವಂತೆ ಮಾಡಿದೆ.