ಕಲಬುರಗಿ: ಈಜಲು ತೆರಳಿದ್ದ ಯುವಕ ಕೆರೆಯಲ್ಲಿ ಜಲ ಸಮಾಧಿಯಾದ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಧಂಗಾಪುರ ಗ್ರಾಮದ ಬಳಿ ನಡೆದಿದೆ.
ಮೃತ ಯುವಕನನ್ನು ಧಂಗಾಪುರ ಗ್ರಾಮದ ಶಿವಶಂಕರ ಧರ್ಮಣ್ಣ ಮಾಂಗ(24) ಎಂದು ಗುರುತಿಸಲಾಗಿದೆ.
ಧಂಗಾಪುರ ಗ್ರಾಮದ ಕೆರೆಗೆ ನಾಲ್ವರು ಯುವಕರು ಈಜಲು ತೆರಳಿದ್ದಾರೆ. ಈ ಮಧ್ಯೆ ಶಿವಶಂಕರ್ ಮುಳುಗಿದ್ದಾನೆ. ತಕ್ಷಣ ಉಳಿದ ಯುವಕರು ಆತನಿಗಾಗಿ ಹುಡುಕಾಟ ನಡೆಸಿದರೂ ಆತನ ಸುಳಿವು ಸಿಕ್ಕಿಲ್ಲ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಮೀನುಗಾರರ ಸಹಾಯದಿಂದ ಅಗ್ನಿಶಾಮಕ ದಳ ಸಿಬ್ಬಂದಿ ಯುವಕನ ಶವವನ್ನು ಹುಡುಕಿದ್ದಾರೆ. ಕೆರೆಯ ಆಳಕ್ಕೆ ಈಜಲು ಹೋಗಿದ್ದರಿಂದ ಈ ಘಟನೆ ನಡೆದಿದೆ ಎಂದು ಆತನ ಜೊತೆ ಈಜಲು ಹೋಗಿದ್ದ ಯುವಕರು ಮಾಹಿತಿ ನೀಡಿದ್ದಾರೆ.
ಈ ಕುರಿತು ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.