ಕಲಬುರಗಿ: ಅತ್ತೆಗೆ ಮನೆ ಹಸ್ತಾಂತರಿಸುವ ವಿಚಾರವಾಗಿ ವಿಚಾರಣೆ ನಡೆಸದಂತೆ ಜಿಲ್ಲಾಧಿಕಾರಿಗಳಿಗೆ ನೋಟಿಸ್ ನೀಡಿದ್ದಲ್ಲದೆ, ಡಿಸಿ ಕಚೇರಿ ಮುಂದೆ ಅನುಚಿತವಾಗಿ ವರ್ತಿಸಿ, ರಂಪಾಟ ಮಾಡುತ್ತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಸಪ್ನಾ ಬಂಧಿತ ಮಹಿಳೆಯಾಗಿದ್ದಾಳೆ.
ಹಿರಿಯ ನಾಗರಿಕರ ಪಾಲನೆ, ಪೋಷಣೆ ಮತ್ತು ಅಧಿನಿಯಮ-2007ರ ಕಲಂ 16ರ ಅಡಿ ಸಲ್ಲಿಸಲಾಗಿರುವ ಮೇಲ್ಮನವಿಗೆ ಬುಧವಾರ ಮಧ್ಯಾಹ್ನ 3 ಗಂಟೆಗೆ ಜಿಲ್ಲಾ ದಂಡಾಧಿಕಾರಿಗಳ ಕಚೇರಿಯಲ್ಲಿ ನಡೆದ ವಿಚಾರಣೆಗೆ ಸಪ್ನಾ ಹಾಜರಾಗಿದ್ದರು. ವಿಚಾರಣೆಗೆ ಹಾಜರಾದ ಸಪ್ನಾ ತನ್ನ ವಾದ ಮಂಡಿಸುವ ಬದಲಾಗಿ 30 ದಿನಗಳ ಕಾಲ ಮೇಲ್ಮನವಿಯ ವಿಚಾರಣೆ ಮಾಡಬಾರದು ಹಾಗೂ ಪ್ರಕರಣವನ್ನು ಬೇರೊಂದು ಪ್ರಾಧಿಕಾರಕ್ಕೆ ವರ್ಗಾಯಿಸಬೇಕು ಎಂದು ಜಿಲ್ಲಾ ದಂಡಾಧಿಕಾರಿಗಳಿಗೆ ನೋಟಿಸ್ ನೀಡಿದ್ದರು. ಜೊತೆಗೆ ನನ್ನ ವಿರುದ್ಧ ನೀವು ತೀರ್ಪು ನೀಡುತ್ತೀರಿ ಎಂದೆಲ್ಲಾ ಕಚೇರಿ ಮುಂದೆ ಮಹಿಳೆ ರಂಪಾಟ ಮಾಡಿದ್ದರಿಂದ ಆಕೆಯನ್ನು ಪೊಲೀಸರ ವಶಕ್ಕೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಸ್ವಪ್ನಾ ಹಾಗೂ ಈಕೆಯ ಪತಿ ರಾಜಶೇಖರ ಸೇರಿ ಆಳಂದ ರಸ್ತೆಯ ವಿಜಯನಗರದಲ್ಲಿ ಇರುವ ಮನೆಯನ್ನು ಕಬ್ಜಾ ಮಾಡಿದ್ದಾರೆ. ನನ್ನ ಸ್ವಯಾರ್ಜಿತ ಆಸ್ತಿಯಾದ ಮನೆ ನನಗೆ ವಹಿಸಿಕೊಡಿ ಎಂದು ರಾಜಶೇಖರನ ತಂದೆ ಶಿವಶರಣಪ್ಪ, ಹಿರಿಯ ನಾಗರಿಕರ ನಿರ್ವಹಣಾ ಮಂಡಳಿ ಅಧ್ಯಕ್ಷರೂ ಆಗಿರುವ ಕಲಬುರಗಿ ಸಹಾಯಕ ಆಯುಕ್ತರು ಹಾಗೂ ಉಪ ವಿಭಾಗೀಯ ದಂಡಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು.
ಈ ನಡುವೆ 2013ರ ಡಿಸೆಂಬರ್ 28ರಂದು ಕಲಬುರಗಿ ಕುಟುಂಬ ನ್ಯಾಯಾಲಯದಲ್ಲಿ ಸಪ್ನಾ ಮತ್ತು ರಾಜಶೇಖರ ವಿಚ್ಛೇದನ ಪಡೆದಿದ್ದಾರೆ. ವಿಚ್ಛೇದನ ಪಡೆದ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರ ಪಾಲನೆ ಕಾಯ್ದೆ ಅಡಿ ಅನಧಿಕೃತವಾಗಿ ಕಬ್ಜಾ ಮಾಡಿರುವ ಮನೆಯನ್ನು ಶಿವಶರಣಪ್ಪ ಮಂಗಲಗಿ ಅವರಿಗೆ ಹಸ್ತಾಂತರಿಸುವಂತೆ 2020ರ ಜನವರಿ 20ರಂದು ಕಲಬುರಗಿ ಸಹಾಯಕ ಆಯುಕ್ತರು ಆದೇಶ ನೀಡಿದ್ದರು.
ವಿಲ್ ಬರೆದಿಟ್ಟ ಮಾವ: ಅಲ್ಲದೆ, ಶಿವಶರಣಪ್ಪ ಅವರು ತನ್ನ ಸ್ವಯಾರ್ಜಿತ ಮನೆಯನ್ನು ತಮ್ಮ ಧರ್ಮಪತ್ನಿ ಪುಷ್ಪಾವತಿ ಅವರಿಗೆ ನೀಡಬೇಕೆಂದು 2019ರಲ್ಲಿ ವಿಲ್ ಪತ್ರ ಬರೆದಿದ್ದು, 2020ರಲ್ಲಿ ಅವರು ನಿಧನರಾಗಿದ್ದಾರೆ. ಇತ್ತ ಕಲಬುರಗಿ ಸಹಾಯಕ ಆಯುಕ್ತರು ನೀಡಿದ ಆದೇಶಕ್ಕೂ ಕ್ಯಾರೇ ಎನ್ನದ ಸಪ್ನಾ ಮನೆಯನ್ನು ಪುಷ್ಪಾವತಿ ಅವರಿಗೆ ವಹಿಸದೇ ತಾನೇ ವಾಸವಾಗಿದ್ದಲ್ಲದೆ, ಸಹಾಯಕ ಆಯುಕ್ತರ ಆದೇಶದ ವಿರುದ್ಧ ಜಿಲ್ಲಾ ದಂಡಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿ ವಿಚಾರಣೆ ವೇಳೆ ಅನುಚಿತ ವರ್ತನೆ ತೋರಿದ್ದರಿಂದ ಮಹಿಳೆಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೆ ಪುಂಡರ ಹುಚ್ಚಾಟ.. ನಿಲ್ಲದ ಯುವಕರ ಬೈಕ್ ವ್ಹೀಲಿಂಗ್ ಶೋಕಿ