ಹಾವೇರಿ: ಸೀಮಂತ ಪ್ರತಿಯೋರ್ವ ಮಹಿಳೆಯ ಜೀವನದ ಅತ್ಯಂತ ಮಹತ್ತರ ಘಟ್ಟ. ಆದರೆ ಕೆಲ ಬಡ ಹೆಣ್ಣು ಮಕ್ಕಳಿಗೆ ಸೀಮಂತದ ಸಂಭ್ರಮವೇ ಇರುವುದಿಲ್ಲ. ಇದನ್ನು ಮನಗಂಡ ಬ್ಯಾಡಗಿ ಪಟ್ಟಣದ ದಾನಮ್ಮದೇವಿ ದೇವಸ್ಥಾನದ ಆಡಳಿತ ಸಮಿತಿ ಬಡ ಹೆಣ್ಣುಮಕ್ಕಳಿಗಾಗಿ ಕಳೆದ 8 ವರ್ಷಗಳಿಂದ ಚೊಚ್ಚಲ ಗರ್ಭಿಣಿಯರಿಗೆ ಸಾಮೂಹಿಕವಾಗಿ ಸೀಮಂತ ಕಾರ್ಯಕ್ರಮ ಆಯೋಜಿಸುತ್ತ ಬಂದಿದೆ. ಪ್ರಸ್ತುತ ವರ್ಷದ ಸಾಮೂಹಿಕ ಸೀಮಂತ ಕಾರ್ಯಕ್ರಮ ಶನಿವಾರ ರಾತ್ರಿ ನಡೆಯಿತು.
ದಾನಮ್ಮದೇವಿ ದೇವಸ್ಥಾನದ ಆವರಣದಲ್ಲಿ 136 ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಕಾರ್ಯ ನೆರವೇರಿಸಲಾಯಿತು. ಬಡವ ಬಲ್ಲಿದ ಹಿಂದೂ ಮುಸ್ಲಿಂ ಎಂಬ ಯಾವುದೇ ಭೇದ ಎನಿಸದೆ ಎಲ್ಲಾ ಚೊಚ್ಚಲ ಗರ್ಭಿಣಿ ಮಹಿಳೆಯರಿಗೆ ಸಾಮೂಹಿಕವಾಗಿ ಸೀಮಂತ ಮಾಡಲಾಯಿತು. ಕಳೆದ 13 ವರ್ಷಗಳಿಂದ ಪ್ರತಿ ವರ್ಷ ದಾನಮ್ಮದೇವಿ ಜಾತ್ರೆ ಮಾಡಲಾಗುತ್ತೆ. ಜಾತ್ರೆ ಪ್ರಯುಕ್ತ ಕಳೆದ 8 ವರ್ಷಗಳಿಂದ ಚೊಚ್ಚಲ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಮಾಡಲಾಗುತ್ತದೆ. ಸೀರೆ, ಕುಪ್ಪಸ, ಹಸಿರು ಬಳೆ, ಅರಿಶಿನ, ಗೋಧಿ ಸರ, ಕಂಕಣ ಕಟ್ಟಿ, ಹೂವಿನ ದಂಡಿ ತಲೆಯ ಮೇಲೆ ಹಾಕಿ, ಅಕ್ಷತೆ ಹಾಕಿ ಸೀಮಂತ ಕಾರ್ಯ ಮಾಡಲಾಯಿತು. ಹಾಗೇ ಅವರ ಬಯಕೆಗೆ ತಕ್ಕಂತೆ ಮಾವಿನಕಾಯಿ, ಬೆಲ್ಲ, ಉಪ್ಪಿನಕಾಯಿ, ಜಿಲೇಬಿ, ಹುಣಸೇಕಾಯಿ, ಬೆಟ್ಟದ ನೆಲ್ಲಿಕಾಯಿ ಸೇರಿದಂತೆ ಸಿಹಿ ತಿನಿಸುಗಳನ್ನು ನೀಡಲಾಯಿತು.
![ಚೊಚ್ಚಲ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮ](https://etvbharatimages.akamaized.net/etvbharat/prod-images/01-12-2024/23016505_uhd.jpg)
ಹೂವಿನಶಿಗ್ಲಿ ವಿರಕ್ತಮಠದ ಚೆನ್ನವೀರೇಶ್ವರ ಶ್ರೀಗಳು ಸೇರಿದಂತೆ ನಗರದ ಗಣ್ಯರು ಮುದ್ದಾದ ಮಗು ಜನಿಸಲಿ ಎಂದು ಹರಸಿದರು. ಜಾನಪದ ಗೀತೆಗಳನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಆಡಳಿತ ಮಂಡಳಿಯ ಸದಸ್ಯೆಯರು ಮತ್ತಷ್ಟು ಮೆರುಗು ತಂದರು. ಸೀಮಂತಕ್ಕೆ ಬಂದ ಮಹಿಳೆಯರ ಸಂಬಂಧಿಕರಿಗೆ ಮತ್ತು ಪಟ್ಟಣದ ಜನತೆಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
![ಚೊಚ್ಚಲ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮ](https://etvbharatimages.akamaized.net/etvbharat/prod-images/01-12-2024/23016505_tman.jpg)
ಇದನ್ನೂ ಓದಿ: ಹಾವೇರಿ ಜಿಪಂನಿಂದ ವಿನೂತನ ಪ್ರಯತ್ನ; ಲಿಂಗತ್ವ ಅಲ್ಪಸಂಖ್ಯಾತರಿಂದ ಅಕ್ಕ ಕೆಫೆ ನಿರ್ವಹಣೆ