ಕಲಬುರಗಿ : ದೇವಸ್ಥಾನವೊಂದರ ಪಕ್ಕದಲ್ಲಿ ನಿಧಿಗಾಗಿ ಭೂಮಿ ಅಗೆಯುತ್ತಿದ್ದ ಮೂವರನ್ನು ಜಿಲ್ಲೆಯ ವಾಡಿ ಪೊಲೀಸರು ಬಂಧಿಸಿದ್ದಾರೆ.
ರಾಂಪೂರ ಹಳ್ಳಿ-ಶಾಂಪೂರ ಹಳ್ಳಿ ಗ್ರಾಮದ ನಡುವಿನ ರಸ್ತೆ ಪಕ್ಕದ ಜಮೀನಿನಲ್ಲಿರುವ ಭಾಗ್ಯವಂತಿ ಎಂಬ ದೇವಸ್ಥಾನ ಹತ್ತಿರ ಆರು ಜನರು ನೆಲ ಅಗೆಯುತ್ತಿದ್ದರು. ಸುಳಿವು ಪತ್ತೆ ಹಚ್ಚಿದ ವಾಡಿ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.
ನಸುಕಿನ ಜಾವ ಈ ಘಟನೆ ನಡೆದಿದ್ದು, ಬಾಗಲಕೋಟೆ ಮೂಲದ ಇನ್ನೂ ಮೂವರು ಕತ್ತಲಲ್ಲಿ ತೆಲೆ ಮರೆಸಿಕೊಂಡಿದ್ದಾರೆ. ಶಾಂಪೂರ ಹಳ್ಳಿಯ ಹಣಮಂತ ಕತ್ರಿ(60), ಬಸಲಿಂಗ ಮಾಡಗಿ (33), ತರ್ಕಸಪೇಠ ಗ್ರಾಮದ ಸಾಯಿಬಣ್ಣಾ ಅರಿಕೇರಿ (55) ಬಂಧಿತ ಆರೋಪಿಗಳು.
ಬಂಧಿತರು ನೆಲ ಅಗೆಯಲು ಬಳಸಿದ್ದ ವಸ್ತುಗಳು ಹಾಗೂ ಆರು ಬೈಕ್ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇಂದು ನಸುಕಿನ ಜಾವ ಪೊಲೀಸರು ಗಸ್ತು ತಿರುಗುತ್ತಿದ್ದಾಗ ರಸ್ತೆ ಬದಿ ಆರು ಬೈಕ್ಗಳು ನಿಂತಿದ್ದವು. ಅನುಮಾನಗೊಂಡ ಹೊಲದೊಳಗೆ ಹೋದಾಗ ಆರೋಪಿಗಳ ಕೃತ್ಯ ಬಯಲಾಗಿದೆ. ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತೆಲೆಮರೆಸಿಕೊಂಡ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.