ಕಲಬುರಗಿ: ಜಿಲ್ಲಾಧಿಕಾರಿ ನಡೆ ಹಳ್ಳಿಗಳ ಕಡೆ ಕಾರ್ಯಕ್ರದಡಿ ಡಿಸಿ ಯಶವಂತ.ವಿ ಗುರುಕರ್ ಅವರು ತಾಲೂಕಿನ ಭೀಮಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ಜನ ಸಾಮಾನ್ಯರೊಂದಿಗೆ ಬೆರೆತು ಸಮಸ್ಯೆಗಳಿಗೆ ಸ್ಪಂದಿಸಿದರು.
ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿ, ಜಿ.ಪಂ ಸಿಇಒ ದೀಷ್ ಸಾಸಿ ಅವರನ್ನು ಹೂವಿನಿಂದ ಅಲಂಕೃತಗೊಂಡ ಟಾಂಗಾದಲ್ಲಿ ಮೆರವಣಿಗೆ ಮೂಡುವ ಮೂಲಕ ಗ್ರಾಮಸ್ಥರು ಭವ್ಯ ಸ್ವಾಗತ ನೀಡಿದರು.
ಜೋಳಿಗೆ ಹಿಡಿದು ಪುಸ್ತಕ ಪಡೆದ ಡಿಸಿ: ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳು ಬಿಳಿ ಪಂಚೆ, ಶರ್ಟ್ ತೊಟ್ಟಿದ್ದು ಎಲ್ಲರ ಗಮನ ಸೆಳೆದರು. ಇದೇ ವೇಳೆ ಮೆರವಣಿಗೆಯುದ್ದಕ್ಕೂ ಕೈಯಲ್ಲಿ ಜೋಳಿಗೆ ಹಿಡಿದ ಡಿಸಿ ಗ್ರಾಮಸ್ಥರಿಂದ ಪುಸ್ತಕಗಳನ್ನು ಪಡೆದರು. ತದನಂತರ ಪಂಚಾಯತಿ ಬಳಿ ಇರುವ ಡಿಜಿಟಲ್ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಒಪ್ಪಿಸಿದರು.
ಸ್ಥಳದಲ್ಲೇ ರುದ್ರಭೂಮಿ ಮಂಜೂರು: ಗ್ರಾಮ ವಾಸ್ತವ್ಯದಲ್ಲಿ ಜಿಲ್ಲಾಧಿಕಾರಿ, ಕಂದಾಯ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳ ಅಹವಾಲು ಆಲಿಸಿದರು. ಈ ವೇಳೆ ಗ್ರಾಮಸ್ಥರು, ಗ್ರಾಮಕ್ಕೆ 3 ಎಕರೆ ರುದ್ರಭೂಮಿಯನ್ನು ಮಂಜೂರು ಮಾಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಡಿಸಿ, ಸಂಜೆ ವೇಳೆಗೆ 1.20 ಎಕರೆ ಜಮೀನನ್ನು ರುದ್ರಭೂಮಿಗೆ ಮಂಜೂರು ಮಾಡಿ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ಆದೇಶದ ಪ್ರತಿ ನೀಡಿದರು.
ಶಾಲೆಗೆ ಫ್ರಿಡ್ಜ್ ಕೊಡಿಸುವಂತೆ ಮನವಿ: ಬಳಿಕ ಜಿಲ್ಲಾಧಿಕಾರಿಗಳು ಆದರ್ಶ ವಿದ್ಯಾಲಯಕ್ಕೆ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿ ಊಟ, ಶಾಲಾ ಸೌಕರ್ಯ ಸಮಸ್ಯೆಗಳ ಅಹವಾಲು ಆಲಿಸಿದರು. ಈ ವೇಳೆ ವಿದ್ಯಾರ್ಥಿಗಳು ಶಾಲೆಗೆ ಫ್ರಿಡ್ಜ್ ಹಾಗೂ ಬೆಡ್ ವ್ಯವಸ್ಥೆ ಮಾಡುವಂತೆ ಕೇಳಿಕೊಂಡರು. ಆಗ ಡಿಸಿ ಈ ಕುರಿತಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಭೋಸಗಾ ಕೆರೆ ವೀಕ್ಷಣೆ: ಭೀಮಳ್ಳಿಯಿಂದ ಕೂಗಳತೆ ದೂರದಲ್ಲಿರುವ ಕೆರೆಭೋಸಗಾ ಗ್ರಾಮಕ್ಕೆ ಡಿಸಿ ಭೇಟಿ ನೀಡಿದರು. ಗ್ರಾಮದ ಶನೇಶ್ವರ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು. ನಂತರ ಭೋಸಗಾ ಕೆರೆಯನ್ನು ವೀಕ್ಷಣೆ ಮಾಡಿದರು. ಈ ವೇಳೆ ಕೆರೆಯ ಸೌಂದರ್ಯೀಕರಣ ಕೈಗೊಂಡು ಪ್ರವಾಸಿ ತಾಣವನ್ನಾಗಿಸಿ ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಗ್ರಾಮಸ್ಥರು ಮನವಿ ಮಾಡಿದರು.
ಇದನ್ನೂ ಓದಿ: ಹಿಜಾಬ್ ತೀರ್ಪು ಸಂಬಂಧ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ: ಇಬ್ಬರ ಬಂಧನ