ಕಲಬುರಗಿ: ಯುಗಾದಿ ಹಬ್ಬವನ್ನು ಜಿಲ್ಲೆಯಲ್ಲಿ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಬೆಳಗ್ಗೆಯಿಂದಲೇ ದೇವಸ್ಥಾನಗಳಿಗೆ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಜನರ ಆರಾಧ್ಯ ದೈವ ಶ್ರೀ ಶರಣ ಬಸವೇಶ್ವರದಲ್ಲಿ ಭಕ್ತರು ಸರದಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿದ ದೃಶ್ಯ ಕಂಡು ಬಂದಿತು.
ಹಿಂದೂ ಧರ್ಮದಲ್ಲಿ ಯುಗಾದಿ ಹಬ್ಬಕ್ಕೆ ಬಹಳ ಮಹತ್ವವಿದೆ. ಕ್ಯಾಲೆಂಡರ್ ಪ್ರಕಾರ ಜನವರಿ ತಿಂಗಳಿಗೆ ಹೊಸ ವರ್ಷ ಆರಂಭವಾದರೆ ಪಂಚಾಂಗದ ಪ್ರಕಾರ ಯುಗಾದಿಗೆ ಹೊಸ ವರ್ಷ ಆರಂಭ ಎಂದು ಪರಿಗಣಿಸಲಾಗುತ್ತದೆ. 'ಯುಗದ ಆದಿ', 'ಯುಗಾದಿ' ಎಂಬ ಶಬ್ದ ಸಂಸ್ಕೃತದ 'ಯುಗ' ಮತ್ತು 'ಆದಿ' ಎಂಬ ಎರಡು ಶಬ್ದಗಳಿಂದ ಕೂಡಿದೆ. ಯುಗವೆಂದರೆ - ಕಾಲಮಾನ - ಅಂದ್ರೆ ಹೊಸ ವರ್ಷ. ಆದಿ ಎಂದರೆ ಆರಂಭ. ಯುಗಾದಿ ಹಬ್ಬ ಪೌರಾಣಿಕ ಹಾಗೂ ಐತಿಹಾಸಿಕ ವಿಶೇಷ ದಿನವಾಗಿದೆ.
ಹೊಸ ವರ್ಷದ ಆರಂಭದ ದಿನವಾದ ಇಂದು ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದರೆ ವರ್ಷಪೂರ್ತಿ ಒಳ್ಳೆಯ ದಿನಗಳು ಪ್ರಾಪ್ತಿಯಾಗಲಿವೆ ಎಂಬ ನಂಬಿಕೆ ಭಕ್ತರದ್ದಾಗಿದೆ. ಈ ಹಿನ್ನೆಲೆ ಇಂದು ಬೆಳಗ್ಗೆಯಿಂದಲೇ ದೇವಾಲಯಗಳಿಗೆ ಭಕ್ತರು ಆಗಮಿಸಿ, ದರ್ಶನ ಪಡೆಯುತ್ತಿದ್ದಾರೆ. ಶ್ರೀ ಶರಣ ಬಸವೇಶ್ವರ ದೇವಸ್ಥಾನ, ಕೋರಂಟಿ ಹನುಮಾನ ದೇವಸ್ಥಾನ, ಗಾಣಗಾಪೂರ ದತ್ತಾತ್ರೇಯ ದೇವಸ್ಥಾನ, ಘತ್ತರಗಿ ಭಾಗಮ್ಮ ದೇವಿ ದೇವಸ್ಥಾನ ಸೇರಿ ಅನೇಕ ಪ್ರಮುಖ ದೇವಸ್ಥಾನಗಳಲ್ಲಿ ಭಕ್ತರು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅಲಂಕಾಲ ಮಾಡಲಾಗಿದೆ.
ಶರಣ ಬಸವೇಶ್ವರ ದೇಗುಲದಲ್ಲಿ ಶರಣರ ದರ್ಶನಕ್ಕೆ ಅರ್ಧ ಕಿಲೋ ಮಿಟರ್ ಉದ್ದ ಭಕ್ತರು ಸರದಿ ಸಾಲಿನಲ್ಲಿ ನಿಂತಿದ್ದಾರೆ. ಎಲ್ಲೆಡೆ ಜಾತ್ರೆಯ ಸಂಭ್ರಮ ಕಳೆಗಟ್ಟಿದೆ. ಈ ಬಾರಿ ಕೋವಿಡ್ ಭೀತಿ ಇಲ್ಲದ ಕಾರಣ ಸಂಭ್ರಮದಿಂದ ಯುಗಾದಿ ಆಚರಣೆ ಕಂಡು ಬರುತ್ತಿದೆ.
ಇದನ್ನೂ ಓದಿ: ನಾಡಿನಾದ್ಯಂತ ಯುಗಾದಿ ಸಂಭ್ರಮ: ಬೆಂಗಳೂರಿನ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ