ಕಲಬುರಗಿ: ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಸೋಲು ಶೋಷಿತರ ಸೋಲು ಎಂಬ ಸಚಿವ ಯುಟಿ ಖಾದರ್ ಹೇಳಿಕೆಗೆ ಸಂಸದ ಡಾ. ಉಮೇಶ ಜಾಧವ್ ಆಕ್ರೋಶ ವ್ಯಕ್ತ ಪಡಿಸಿದರು.
ದೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಒಬ್ಬರೇ ಶೋಷಿತರು ಇದ್ದಾರೆಯೇ ? ಹಿಂದೆ ಸತತ 11 ಬಾರಿ ಗೆದ್ದಾಗ ಅವರು ಏನು ಮಾಡಿದ್ದಾರೆ? ಪ್ರಜಾಪ್ರಭುತ್ವದಲ್ಲಿ ಸೋಲು-ಗೆಲುವನ್ನು ಒಪ್ಪಿಕೊಳ್ಳಬೇಕು. ಮತದಾರಿರಿಗೆ ಯಾವ ನಾಯಕನನ್ನು ಆಯ್ಕೆ ಮಾಡಬೇಕೆಂಬದು ತಿಳಿದಿದೆ ಅವರ ವಿವೇಚನಗೆ ಬೆಲೆ ಕೊಡಬೇಕು ಹಾಗೂ ಕಾಂಗ್ರೆಸ್ ನಾಯಕರುಗಳಿಗೆ ಯಾರು ಶೋಷಿತರು ಎನ್ನುವುದೇ ತಿಳಿಯುತ್ತಿಲ್ಲ, ಖರ್ಗೆ ಸೋತರು ಎಂಬ ಒಂದೇ ವಿಷಯಕ್ಕೆ ಶೋಷಿತರೆಲ್ಲ ಸೋತಿದ್ದಾರೆ ಎಂಬುದಲ್ಲ ಎಂದು ಜಾಧವ ತಿರುಗೇಟು ನೀಡಿದರು.
ಬುದ್ದಿ ಸರಿಯಿಲ್ಲದವರು ಹೀಗೆ ಹೇಳ್ತಾರೆ:
ಮೋದಿಗೆ ಮತ ನೀಡಿ ಕೆಲಸ ನಮಗೆ ಕೇಳುತ್ತಿರಾ? ಎನ್ನುವ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಜಾದವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗೆ ಹೇಳುವವರ ಬುದ್ಧಿ ಸರಿಯಿಲ್ಲ, ಮತ ಹಾಕಲಿ, ಹಾಕದಿರಲಿ ಎಲ್ಲರ ಪರವಾಗಿ ನಿಷ್ಪಕ್ಷಪಾತವಾಗಿ ಕೆಲಸ ಮಾಡುವಂತೆ ಪ್ರಧಾನಿ ನಮಗೆ ಸೂಚಿಸಿದ್ದಾರೆ ಅದರಂತೆ ನಾವೂ ನೆಡೆದು ಕೊಳ್ಳುತ್ತೇವೆ ಎಂದು ಹೇಳಿದರು.
ಕೇಂದ್ರ ಸರಕಾರದ ಬಜೆಟ್ ಒಂದು ಐತಿಹಾಸಿಕ ಹಾಗೂ ಮಧ್ಯಮ ವರ್ಗದವರ ಪಾಲಿನ ಕ್ರಾಂತಿಕಾರಕ ಬಜೆಟ್ ಆಗಿದೆ ಹಾಗೂ ಎಲ್ಲ ರಾಜ್ಯ ಸರಕಾರಗಳು ತಾರತಮ್ಯ ಬಿಟ್ಟು ಕೇಂದ್ರದ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕು. ಕೆಲವರು ಸುಮ್ಮನೇ ಟೀಕಿಸಬೇಕೆಂದು ಟೀಕಿಸುತ್ತಿದ್ದಾರೆ ಇದು ಸರಿಯಲ್ಲ ಎಂದು ಪರೋಕ್ಷವಾಗಿ ಸಚಿವ ಪ್ರಿಯಾಂಕ್ ಖರ್ಗೆಗೆ ಟಾಂಗ್ ನೀಡಿದರು.