ಕಲಬುರಗಿ: ಹೊಲಕ್ಕೆ ಹೋಗಿ ವಾಪಸ್ ಮನೆಗೆ ತೆರಳುವಾಗ ಹಳ್ಳ ದಾಟುವ ವೇಳೆ ನೀರಿನ ರಭಸಕ್ಕೆ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ.
ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಯುವಕ ಶವವಾಗಿ ಪತ್ತೆಯಾದ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕರದಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು 21 ವರ್ಷದ ಶಿವರಾಜ್ ಎಂದು ಗುರುತಿಸಲಾಗಿದೆ.
ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಕರದಳ್ಳಿ ಕರೆ ಭರ್ತಿಯಾಗಿತ್ತು. ಕೆರೆಯ ಕೋಡಿಯಿಂದ ಹರಿದ ನೀರಿನಲ್ಲಿ ಯುವಕ ಕೊಚ್ಚಿ ಹೋಗಿದ್ದ. ಸೋಮವಾರ ಸಂಜೆ ಹೊಲದಿಂದ ಮನೆಗೆ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಶಿವರಾಜ್ ಕೊಚ್ಚಿ ಹೋಗಿದ್ದ. ಆದರೆ ನಿನ್ನೆ ಈತನಿಗಾಗಿ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇಂದು ಬೆಳಗ್ಗೆಯಿಂದಲೇ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಕೊನೆಗೂ ಯುವಕನ ಶವ ಹಳ್ಳದಲ್ಲಿ ಪತ್ತೆಯಾಗಿದೆ.
ಸ್ಥಳಕ್ಕೆ ತಹಶೀಲ್ದಾರ್ ಉಮಾಕಾಂತ ಹಳ್ಳೆ, ಸಿಪಿಐ ಕೃಪ್ಣಪ್ಪ ಕಲ್ಲದೇವರ, ಪಿಎಸ್ ಐ ಶ್ರೀಶೈಲ ಅಂಬಾಂಟಿ, ತೋಟಗಾರಿಕೆ ಸಹಾಯಕ ನಿರ್ದೇಶಕ ಸಿದ್ದು ಅಣಬಿ, ಕೃಷಿ ಸಹಾಯಕ ನಿರ್ದೇಶಕ ಸಂಜುಕುಮಾರ ಮಾನಕರೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.