ಕಲಬುರಗಿ: ಶಾಸಕ ಬಸವರಾಜ್ ಮತ್ತಿಮೂಡ್ ಅವರ ಪತ್ನಿಯ ಕಾರನ್ನು ಕ್ರಿಕೆಟ್ ಬೆಟ್ಟಿಂಗ್ ಪ್ರಕರಣದಲ್ಲಿ ಸೀಜ್ ಮಾಡಿದ್ದ ಪ್ರಕರಣವೀಗ ಜಿಲ್ಲೆಯಲ್ಲಿ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.
ಕಲಬುರಗಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ್ ಮತ್ತಿಮೂಡ್ ಪತ್ನಿ ಜಯಶ್ರೀ ಮತ್ತಿಮೂಡ್ ಕಾರನ್ನು ಕ್ರಿಕೆಟ್ ಬೆಟ್ಟಿಂಗ್ ಪ್ರಕರಣ ಹಿನ್ನೆಲೆ ಮಹಾರಾಷ್ಟ್ರದ ಸೋಲಾಪುರದ ಸಿಸಿಬಿ ಪೊಲೀಸರು ಕಲಬುರಗಿಯ ಮನೆಯೊಂದರ ಮೇಲೆ ದಾಳಿ ನಡೆಸಿದ್ದ ವೇಳೆ ಸೀಜ್ ಮಾಡಿದ್ದರು.
ಈ ಪ್ರಕರಣ ಕಲಬುರಗಿ ಅಲ್ಲದೆ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಕಾರು ಜಪ್ತಿ ಪ್ರಕರಣ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಮತ್ತು ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಮಧ್ಯೆ ಟಾಕ್ ವಾರ್ಗೆ ಕಾರಣವಾಗಿದೆ.
ಶಾಸಕರ ಪತ್ನಿ ಕಾರು ಜಪ್ತಿ ಹಿಂದೆ ಪ್ರಿಯಾಂಕ್ ಖರ್ಗೆ ಕೈವಾಡವಿದೆ, ಶಾಸಕರ ಜನಪ್ರಿಯತೆ ಸಹಿಸಿಕೊಳ್ಳದೆ ಮಹಾರಾಷ್ಟ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಕಾರನ್ನು ಜಪ್ತಿ ಮಾಡಿಸಲಾಗಿದೆ ಎಂದು ಮಾಲೀಕಯ್ಯ ಗುತ್ತೇದಾರ್ ಆರೋಪಿಸಿದ್ದು, ಅಲ್ಲದೆ ಈ ರೀತಿ ದ್ವೇಷ ರಾಜಕಾರಣ ಮಾಡಬಾರದೆಂದು ಪ್ರಿಯಾಂಕ್ ಖರ್ಗೆಗೆ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ನಾವು ಯಾರಿಂದಲೂ ಪರ್ಸೆಂಟೆಜ್ ತೆಗೆದುಕೊಳ್ಳುವುದಿಲ್ಲ, ನಮ್ಮ ಕೈಯಿಂದ ದುಡ್ಡು ಖರ್ಚು ಮಾಡಿ ರಾಜಕೀಯ ಮಾಡುತ್ತೇವೆ ಎಂದು ಪರೋಕ್ಷವಾಗಿ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಾಲೀಕಯ್ಯ ಗುತ್ತೇದಾರ್ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಶಾಸಕ ಪ್ರಿಯಾಂಕಲ್ ಖರ್ಗೆ, ಮಾಲೀಕಯ್ಯ ಗುತ್ತೇದಾರ ಬಗ್ಗೆ ಅಪಾರ ಗೌರವ ಇತ್ತು. ಈಗಲೂ ಅಲ್ಪಸ್ವಲ್ಪ ಇದೆ. ಅದನ್ನು ಕಳೆದುಕೊಳ್ಳಬೇಡಿ ಗುತ್ತೇದಾರ ಸಾಹೇಬ್ರೆ, ಕ್ರಿಕೆಟ್ ಬೆಟ್ಟಿಂಗ್ನಿಂದ ನಮ್ಮ ಜಿಲ್ಲೆಯ ಯುವಕರ ಭವಿಷ್ಯ ಹಾಳಾಗುತ್ತಿದೆ. ಮಾಲೀಕಯ್ಯ ಗುತ್ತೇದಾರ್ ನನಗೆ ಬೆನ್ನು ತಟ್ಟಿ ತನಿಖೆಗೆ ಆಗ್ರಹಿಸಬೇಕಿತ್ತು. ಆದರೆ ಅವರು ಹಿರಿಯರು ನನ್ನಿಂದ ಕಲಿಯುವಂತಾಗಬಾರದು ಎಂದು ಟಾಂಗ್ ನೀಡಿದ್ದಾರೆ.
ಜಿಲ್ಲೆಯ ಪೊಲೀಸರ ಮೇಲೆ ನಂಬಿಕೆ ಇಲ್ಲದಂತಾಗಿದೆ. ಹೀಗಾಗಿಯೇ ಮಹಾರಾಷ್ಟ್ರ ಪೊಲೀಸರು ಗೌಪ್ಯವಾಗಿ ದಾಳಿ ಮಾಡಿದ್ದಾರೆ. ಮಹಾರಾಷ್ಟ್ರ ಪೊಲೀಸರ ಮೇಲೆ ಪ್ರಭಾವ ಬೀರುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ನಿಮಗೆ ಧೈರ್ಯ ಇದ್ದರೆ ಗೃಹ ಇಲಾಖೆ ಗಮನಕ್ಕೆ ತನ್ನಿ, ಬೆಟ್ಟಿಂಗ್ ದಂಧೆಕೋರರನ್ನು ಈಗಾಗಲೇ ಬಂಧಿಸಬೇಕಿತ್ತು. ಅದನ್ನು ಬಿಟ್ಟು ನನಗೆ ವಾರ್ನ್ ಮಾಡಲು ಇವರು ಯಾರು ಎಂದು ಪ್ರಶ್ನಿಸಿದ್ದಾರೆ.
ನನಗೆ ಎಚ್ಚರಿಕೆ ನೀಡುವ ಬದಲು ಬಿಜೆಪಿ ಹೈಕಮಾಂಡ್ಗೆ ಅವರು ವಾರ್ನ್ ಮಾಡಬೇಕಿತ್ತು. ಜಿಲ್ಲೆಗೆ ಒಂದೂ ಸಚಿವ ಸ್ಥಾನವನ್ನು ನೀಡಿಲ್ಲ. ತಾಕತ್ತಿದ್ರೆ ಅವರು ಬಿಜೆಪಿ ಹೈಕಮಾಂಡ್ಗೆ ಎಚ್ಚರಿಕೆ ರವಾನಿಸಿ ಸಚಿವ ಸ್ಥಾನ ಕೊಡಿಸಲಿ. ರಾಜೀನಾಮೆ ನೀಡುವುದಾಗಿ ಘೋಷಿಸಲಿ. ಅದನ್ನು ಬಿಟ್ಟು ನನ್ನಂಥವರಿಗೆ ವಾರ್ನ್ ಮಾಡೋದ್ರಲ್ಲಿ ಅರ್ಥವಿಲ್ಲ ಎಂದು ಪ್ರಿಯಾಂಕ್ ಖರ್ಗೆ ಗುತ್ತೇದಾರ್ಗೆ ತಿರುಗೇಟು ನೀಡಿದ್ದಾರೆ.
ಇತ್ತ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ಕಾರು ಜಪ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಬಸವರಾಜ್ ಮತ್ತಿಮೂಡ್ ಕ್ರಿಕೆಟ್ ಬೆಟ್ಟಿಂಗ್ಗೂ ನಮಗೂ ಸಂಬಂಧ ಇಲ್ಲವೆಂದು ಪ್ರತಿಪಕ್ಷದವರ ಆರೋಪವನ್ನು ತಳ್ಳಿಹಾಕಿದ್ದಾರೆ.