ಕಲಬುರಗಿ : ಇತ್ತೀಚಿನ ಜನರಿಗೆ 60 ವರ್ಷವಾದ್ರೆ ಸಾಕು ಸುಸ್ತೋ ಸುಸ್ತು.. ಬಿಪಿ, ಶುಗರ್ ಅದು ಇದು ಅಂತಾ ಆಸ್ಪತ್ರೆ ಮೆಟ್ಟಿಲು ಸವೆಸಿ ಬಿಡುತ್ತಾರೆ. ಆದರೆ, ಅಫ್ಜಲಪುರ ತಾಲೂಕಿನ ಹೂವಿನಹಳ್ಳಿ ಗ್ರಾಮದ ನಿವಾಸಿ ಗುರುಲಿಂಗಪ್ಪ ಎಂಬ 104 ವರ್ಷದ ಹಿರಿಯ ಜೀವ ಈಗಲೂ ಯುವಕರಂತೆ ಆ್ಯಕ್ಟೀವ್ ಆಗಿದ್ದಾರೆ.
1917ರಲ್ಲಿ ಜನಿಸಿರುವ ಗುರುಲಿಂಗಪ್ಪ, ಸ್ವಾತಂತ್ರ್ಯ ಹೋರಾಟದಲ್ಲೂ ಭಾಗಿಯಾಗಿದ್ದರಂತೆ. ಹೈದರಾಬಾದ್ ನಿಜಾಮನ ಕಪಿಮುಷ್ಠಿಯಲ್ಲಿದ್ದ ಹೈದರಾಬಾದ್ ಕರ್ನಾಟಕದ ಸ್ವಾತಂತ್ರ್ಯಕ್ಕಾಗಿ ನಿಜಾಮನ ಸೈನ್ಯದೊಂದಿಗೆ ಹೋರಾಡಿ ಮೂರು ತಿಂಗಳು ಸೆರೆವಾಸ ಅನುಭವಿಸಿದ್ದರಂತೆ. 104 ವಸಂತ ಉರುಳಿದ್ರೂ ಈಗಲೂ ಕಣ್ಣು ಚೆನ್ನಾಗಿ ಕಾಣಿಸುತ್ತವೆ. ಸ್ವಲ್ಪ ಕಿವಿ ಮಂದ ಅಷ್ಟೇ.. ಅಂತಾ ಅಜ್ಜ ನಗೆ ಬೀರುತ್ತಾರೆ.
ನಿಮ್ಮ ವಯಸ್ಸಿನ ಗುಟ್ಟೇನು ಅಂದರೆ, ಆಯಸ್ಸು ಹೆಚ್ಚಾಗಲು ನಾನು ನಿತ್ಯ ಶ್ರೀಶೈಲ ಮಲ್ಲಿಕಾರ್ಜುನ ದೇವರ ನಾಮ ಜಪಿಸುತ್ತೇನೆ, ಬರೆಯುತ್ತೇನೆ ಅಂತಾರೆ. ಕಳೆದ 10 ವರ್ಷಗಳಿಂದ 22 ಲಕ್ಷ ಬಾರಿ ದೇವರ ಹೆಸರು ಬರೆದು ಶೇಖರಿಸಿದ್ದಾರಂತೆ. ಕನ್ನಡ ಮಾತಾಡುವ ಇವರಿಗೆ ಕನ್ನಡ ಬರೆಯೋಕೆ ಬರಲ್ಲ. ಮರಾಠಿ ಭಾಷೆಯಲ್ಲಿ 6ನೇ ತರಗತಿವರೆಗೂ ವಿದ್ಯಾಭ್ಯಾಸ ಮಾಡಿದ್ದಾರೆ.
ಉರ್ದು, ಹಿಂದಿ, ಮರಾಠಿ ಭಾಷೆಗಳಲ್ಲಿ ಬರೆಯುತ್ತಾರೆ. ಅಷ್ಟೇ ಅಲ್ಲ, ಇವರ ಧರ್ಮಪತ್ನಿ ಗಜಾಬಾಯಿ ದೇಶಮುಖ್ ಅವರಿಗೂ 85 ವರ್ಷ ವಯಸ್ಸಾದ್ರೂ ಆರೋಗ್ಯವಾಗಿದ್ದಾರೆ. ನಿತ್ಯ ರೊಟ್ಟಿ ತಟ್ಟುವ ಇವರು ದಿನದ ಮನೆಯ ಎಲ್ಲಾ ಕೆಲಸಗಳನ್ನ ಮಾಡ್ತಾರೆ.
ಗುರುಲಿಂಗಪ್ಪ ದೇಶಮುಖ ಅವರಿಗೆ ಮೂವರು ಗಂಡು ಮಕ್ಕಳು, ಆರು ಜನ ಹೆಣ್ಣು ಮಕ್ಕಳಿದ್ದು, 27 ಜನ ಮೊಮ್ಮಕ್ಕಳಿದ್ದಾರೆ. ಸದಾ ಲವಲವಿಕೆಯಿಂದ ಇರುವ ಈ ದಂಪತಿಯನ್ನ ಕಂಡರೆ ಎಲ್ಲರಿಗೂ ಪ್ರೀತಿ.