ಸೇಡಂ: ಕೊರೊನಾ ಸೋಂಕಿಗೆ ಗುರಿಯಾಗಿದ್ದ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಪತ್ನಿ ಮತ್ತು ಪುತ್ರ ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಹೊರಬಂದು 15 ದಿನಗಳ ಹೋಂ ಕ್ವಾರಂಟೈನ್‌ಗೆ ಒಳಪಟ್ಟಿದ್ದಾರೆ.
ಈ ಕುರಿತು ಖುದ್ದು ಶಾಸಕ ತೇಲ್ಕೂರ ಮಾಧ್ಯಮಕ್ಕೆ ಮಾಹಿತಿ ನೀಡಿದ್ದು, ಕ್ಷೇತ್ರದ ಜನರ ಪ್ರಾರ್ಥನೆ ಫಲಿಸಿದ್ದು, ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದೇವೆ. ವೈದ್ಯರ ಸೂಚನೆಯಂತೆ ಹೋಂ ಕ್ವಾರಂಟೈನ್ ಪೂರ್ಣಗೊಂಡ ನಂತರ ಜನರ ಸೇವೆಗೆ ಬರುವುದಾಗಿ ತಿಳಿಸಿದ್ದಾರೆ.
ಸದ್ಯ ಬೆಂಗಳೂರಿನ ನಿವಾಸದಲ್ಲಿ ತಂಗಿದ್ದು, ಜನ ಯಾವುದೇ ಕಾರಣಕ್ಕೂ ಆತಂಕ ಪಡುವ ಅವಶ್ಯಕತೆ ಇಲ್ಲ. ಕೊರೊನಾದ ಜೊತೆ ಸಾಮಾಜಿಕ ಅಂತರ, ಕಡ್ಡಾಯ ಮಾಸ್ಕ್ ಧರಿಸುವ ಮೂಲಕ ಪ್ರತಿಯೊಬ್ಬರೂ ಹೋರಾಡಬೇಕಿದೆ. ಸ್ವಚ್ಛತೆಯನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕಿದೆ. ಮಳೆಗಾಲವೂ ಆಗಮಿಸಿದ್ದರಿಂದ ಅನೇಕ ಕಡೆ ಪ್ರವಾಹದ ವಾತಾವರಣ ನಿರ್ಮಾಣವಾಗುತ್ತಿದೆ. ಸಮಸ್ಯೆಗಳ ಬಗ್ಗೆ ಸದಾಕಾಲ ಅಧಿಕಾರಿಗಳ ಜೊತೆಗೆ ಚರ್ಚಿಸುತ್ತಿದ್ದು, ಮಾಹಿತಿ ಪಡೆಯುತ್ತಿದ್ದೇನೆ. ಯಾವುದೇ ಕಾರಣಕ್ಕೂ ಕ್ಷೇತ್ರದ ಜನತೆಗೆ ಸಮಸ್ಯೆಯಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಿದ್ದೇನೆ. ಈಗಾಗಲೇ ಕೆಲ ಮನೆಗಳು ಕುಸಿದಿದ್ದು ಪರಿಹಾರ ಕಲ್ಪಿಸುವ ಸಂಬಂಧ ಸರ್ಕಾರದ ಜೊತೆಗೆ ಚರ್ಚಿಸಿದ್ದೇನೆ ಎಂದು ತಿಳಿಸಿದ್ದಾರೆ.