ಕಲಬುರಗಿ: ವಿಶೇಷ ಚೇತನರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸರ್ಕಾರಿ ಉದ್ಯೋಗದಲ್ಲಿ ಹಾಗೂ ಖಾಸಗಿ ಕಂಪನಿಗಳ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಿವೆ. ಆದರೆ ಇದು ಸಮರ್ಪಕ ಅನುಷ್ಠಾನಕ್ಕೆ ಬಾರದ ಕಾರಣ ಯೋಜನೆಯಿಂದ ಹಲವರು ವಂಚಿತರಾಗುವಂತಾಗುತ್ತಿದೆ.
ಕಲಬುರಗಿ ಜಿಲ್ಲೆಯಲ್ಲಿ ದೇಹದ ವಿವಿಧ ಅಂಗಾಂಗಗಳ ವಿಕಲತೆಯಿಂದ ಬಳಲುತ್ತಿರುವರ ಸಂಖ್ಯೆ 70 ಸಾವಿರ ಇದೆ. ಇಷ್ಟೊಂದು ವಿಶೇಷ ಚೇತನರು ಜಿಲ್ಲೆಯಲ್ಲಿ ಇದ್ದರೂ ಉದ್ಯೋಗದಲ್ಲಿ ಮೀಸಲಾತಿ ನೀರಿಕ್ಷೆಯಂತೆ ಸಿಗುತ್ತಿಲ್ಲ. ಸರ್ಕಾರಿ ವಲಯದಲ್ಲಿ ಮೀಸಲಾತಿಯಿಂದ ಒಂದಿಷ್ಟು ಉದ್ಯೋಗಗಳು ದೊರಕಿದ್ದು, ಖಾಸಗಿ ವಲಯದಲ್ಲಿ ಮಾತ್ರ ಇವರಿಗೆ ಉದ್ಯೋಗ ಸಿಗುವದು ದುಸ್ಥರವಾಗಿದೆ.
ವಿಕಲಾಂಗ ವ್ಯಕ್ತಿಗಳ ಹಕ್ಕುಗಳ ಕಾಯ್ದೆ 2016 ರ ಅನ್ವಯ, ಸರ್ಕಾರಿ ಉದ್ಯೋಗದಲ್ಲಿ ಶೇ. 4 ರಷ್ಟು ಹಾಗೂ ಖಾಸಗಿ ವಲಯದಲ್ಲಿ ಶೇ. 5 ರಷ್ಟು ಉದ್ಯೋಗ ಮೀಸಲಾತಿ ನೀಡಬೇಕು. ಆದರೆ ಬಹುತೇಕ ವಿಕಲಚೇತನರು ಉದ್ಯೋಗದಿಂದ ವಂಚಿತರಾಗುತ್ತಿದ್ದು, ಶೇ.12 ರಷ್ಟು ಜನರು ಮಾತ್ರ ಉದ್ಯೋಗ ಪಡೆದಿದ್ದಾರೆ.
ಹಿಂದುಳಿದ ಈ ಭಾಗದಲ್ಲಿ ಖಾಸಗಿ ಕಂಪನಿಗಳು ಸಂಖ್ಯೆ ಕಡಿಮೆ ಇದೆ. ಇರುವ ಕಂಪನಿಗಳಲ್ಲಿಯೂ ಅವರಿಗೆ ಉದ್ಯೋಗ ಅವಕಾಶ ಸಿಗುತ್ತಿಲ್ಲ. ಸರ್ಕಾರಿ ನಿಯಮಾವಳಿ ಗಾಳಿಗೆ ತೂರಲಾಗುತ್ತಿದ್ದು, ಇದರಿಂದಾಗಿ ಸರ್ಕಾರದ ವಿಕಲಾಂಗ ವ್ಯಕ್ತಿಗಳ ಹಕ್ಕುಗಳ ಕಾಯ್ದೆ ನೆಪ ಮಾತ್ರಕ್ಕೆ ಎನ್ನುವಂತಾಗಿದೆ.