ಕಲಬುರಗಿ: ಬಾಕಿ ವೇತನ ಪಾವತಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರ ಗುತ್ತಿಗೆ ನೌಕರರ ಸಂಘದಿಂದ ಪ್ರತಿಭಟನೆ ನಡೆಯಿತು.
ನಗರದ ಜಿಲ್ಲಾ ಪಂಚಾಯತ್ ಕಚೇರಿ ಮುಂದೆ ಧರಣಿ ನಡೆಸಿದ ಹೊರ ಗುತ್ತಿಗೆ ನೌಕರರು ಹಾಗೂ ಕೂಲಿ ಕಾರ್ಮಿಕರು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಹೊರ ಗುತ್ತಿಗೆ ಕಾರ್ಮಿಕರಿಗೆ ಕಳೆದ ಒಂಭತ್ತು ತಿಂಗಳಿನಿಂದ ವೇತನ ನೀಡದೆ ಸರ್ಕಾರ ಬೇಜವಾಬ್ದಾರಿತನ ತೋರುತ್ತಿದೆ. ಕೂಡಲೇ ಬಾಕಿ ವೇತನ ಹಾಗೂ ಕೋವಿಡ್ ರಜೆ ವೇತನ ಪಾವತಿಸಬೇಕು. ನೇರ ನೇಮಕಾತಿಯಿಂದ ಕೆಲಸ ಕಳೆದುಕೊಂಡ ಗುತ್ತಿಗೆ ನೌಕರರಿಗೆ ಹೊಸದಾಗಿ ಪ್ರಾರಂಭಿಸಲಾದ ವಸತಿ ನಿಲಯಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿದರು.
ಕ್ವಾರಂಟೈನ್ ಕೇಂದ್ರದಲ್ಲಿ ಅಡುಗೆ ಮಾಡಿದವರಿಗೂ ಕೊಟ್ಟಿಲ್ಲ ವೇತನ: ಕೊರೊನಾ ಸಂದರ್ಭದಲ್ಲಿ ಸ್ಥಾಪಿಸಲಾದ ಕ್ವಾರಂಟೈನ್ ಕೇಂದ್ರಗಳಲ್ಲಿ ಸೋಂಕಿತರಿಗೆ ಅಡುಗೆ ಮಾಡಿ ಕೊಟ್ಟ ಕಾರ್ಮಿಕರಿಗೂ ವೇತನ ನೀಡಿಲ್ಲ. ತಮ್ಮ ಜೀವದ ಹಂಗು ತೊರೆದು ಕ್ವಾರಂಟೈನ್ ಕೇಂದ್ರಗಳಲ್ಲಿ ಕೊರೊನಾ ಸೋಂಕಿತರಿಗೆ ಅಡುಗೆ ಮಾಡಿಕೊಟ್ಟ ಕಾರ್ಮಿಕರ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಕೂಡಲೇ ಸರ್ಕಾರ ಮೊಂಡುತನ ತೊರೆದು ಸಂಕಷ್ಟದಲ್ಲಿರುವ ಕೂಲಿ ಕಾರ್ಮಿಕರ ನೆರವಿಗೆ ಧಾವಿಸಬೇಕು ಎಂದು ಸಮಿತಿಯ ಜಿಲ್ಲಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ಒತ್ತಾಯಿಸಿದರು.