ಕಲಬುರಗಿ: ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರದ್ದು ಮೊಸರಲ್ಲಿ ಕಲ್ಲು ಹುಡುಕುವ ಪ್ರವೃತ್ತಿ ಎಂದು ಹೇಳುವ ಮೂಲಕ ಸಂಸದ ಉಮೇಶ್ ಜಾಧವ್ ಅವರು ಕಿಡಿಕಾರಿದ್ದಾರೆ.
ಸಚಿವ ಸ್ಥಾನ ಸಿಗಲಿಲ್ಲವೆಂದು ಜಾಧವ್ ಕಾಂಗ್ರೆಸ್ ತೊರೆದಿದ್ದರು. ಆದ್ರೆ ಈಗ ಈ ಭಾಗಕ್ಕೆ ಒಂದೂ ಸಚಿವ ಸ್ಥಾನ ನೀಡದಿದ್ದರೂ ಸುಮ್ಮನೆ ಕುಳಿತಿದ್ದಾರೆ ಎಂಬ ಪ್ರಿಯಾಂಕ್ ಖರ್ಗೆ ಆರೋಪಕ್ಕೆ ನಗರದಲ್ಲಿ ಜಾಧವ್ ಪ್ರತಿಕ್ರಿಯೆ ನೀಡಿದ್ದಾರೆ.
ಇರಲಾರದ ವಿಷಯವನ್ನು ಕೆದಕಿ ಟೀಕೆ ಮಾಡುವ ಸ್ವಭಾವ ಪ್ರಿಯಾಂಕ್ ಅವರದ್ದು. ಈ ಭಾಗಕ್ಕೆ ಸಚಿವ ಸ್ಥಾನ ನೀಡಿಲ್ಲ, ಅಭಿವೃದ್ಧಿ ನಡೆದಿಲ್ಲ ಅಂತ ಆರೋಪ ಮಾಡ್ತಾರೆ. ಯಡಿಯೂರಪ್ಪ ಮುಖ್ಯಮಂತ್ರಿ ಆದಾಗಿನಿಂದಿಲೂ ಹಿಂದುಳಿದ ಭಾಗದ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದಾರೆ. ಎಲ್ಲರನ್ನು ಒಮ್ಮೆಗೆ ಸಚಿವರನ್ನಾಗಿ ಮಾಡಲಾಗುವುದಿಲ್ಲ. ಮುಂದಿನ ದಿನಗಳಲ್ಲಿ ಈ ಭಾಗಕ್ಕೆ ಸಚಿವ ಸ್ಥಾನವನ್ನು ಕೊಡ್ತಾರೆ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.
ಬಿಜೆಪಿ ಸರ್ಕಾರದ ಅಭಿವೃದ್ಧಿ ಸಹಿಸದೆ ಪ್ರಿಯಾಂಕ್ ಖರ್ಗೆ ಮೊಸರಲ್ಲಿ ಕಲ್ಲು ಹುಡುಕೋ ಕೆಲಸ ಮಾಡ್ತಿದಾರೆ. ಇದೇ ವೇಳೆ ಎರಡನೆಯ ಸುತ್ತಿನ ಆಪರೇಷನ್ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಜಾಧವ್, ನಮ್ಮಲ್ಲಿ ಯಾರೂ ಆಪರೇಷನ್ ಮಾಡಲ್ಲ, ಅವರಾಗಿಯೇ ಬರುತ್ತಿದ್ದಾರೆ. ಪಕ್ಷ ತೊರೆಯಲೇಬೇಕೆಂಬ ವಾತಾವರಣ ನಿರ್ಮಿಸುತ್ತಿದ್ದಾರೆ. ಭಾರತ ಪ್ರಜಾಪ್ರಭುತ್ವ ರಾಷ್ಟ್ರ, ಅವರಾಗಿಯೇ ನಿರ್ಧಾರ ತೆಗೆದುಕೊಳ್ಳೋ ಸ್ವಾತಂತ್ರ್ಯವಿದೆ. ಮೋದಿ ಅವರ ಕಾರ್ಯವೈಖರಿ ಮೆಚ್ಚಿ ಶಾಸಕರು ಬರ್ತಿದ್ದಾರೆ ಎಂದರು.
ದೇಶದ ಹಲವೆಡೆಯಿಂದ ಶಾಸಕರು ಬಿಜೆಪಿಯತ್ತ ಸಾಗಿ ಬರುತ್ತಿದ್ದಾರೆ. ರಾಜ್ಯದಲ್ಲಿಯೂ ಇದೇ ಬೆಳವಣಿಗೆಯಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ತೊರೆದ ಶಾಸಕರು ಕಣ್ಣೀರು ಹಾಕುತ್ತಿದ್ದಾರೆ ಎಂಬುದು ಊಹಾಪೋಹದ ವಿಷಯ. ಪಕ್ಷಾಂತರ ಮಾಡಿ ಬಂದಿರೋ ಶಾಸಕರನ್ನು ಬಿಜೆಪಿ ಸರಿಯಾಗಿಯೇ ನಡೆಸಿಕೊಳ್ಳುತ್ತಿದೆ ಎಂದು ಜಾಧವ್ ಸ್ಪಷ್ಟಪಡಿಸಿದ್ದಾರೆ.