ಕಲಬುರಗಿ: ದೇಶದಲ್ಲಿ ತುಘಲಕ್ ದರ್ಬಾರ್ ನಡೆಯುತ್ತಿದೆ. ಹೀಗಾಗಿ ಎಲ್ಲರಿಗೂ ಒಂದೇ ಕಾನೂನು ಅನ್ನೋದರ ಬದಲು, ಒಬ್ಬೊಬ್ಬರಿಗೆ ಒಂದೊಂದು ಕಾನೂನು ಎಂಬಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷಗಳ ಬಾಯಿ ಮುಚ್ಚಿಸುವ ಷಡ್ಯಂತ್ರ ಪ್ರಧಾನಿ ಮೋದಿಯಿಂದ ನಡೆದಿದೆ ಎಂದು ಆರೋಪಿಸಿದರು. ಅಲ್ಲದೆ, ಐಟಿ, ಇಡಿ, ಸಿಬಿಐ ಸಂಸ್ಥೆಗಳು ರಾಜಕೀಯ ದಾಳಗಳಾಗಿವೆ. ಡಿಕೆಶಿ ವಿರುದ್ಧ ದಾಳಿ ಮಾಡಿದ್ದು ಐಟಿ ಸಂಸ್ಥೆಯಾದರೆ, ಅವರನ್ನು ಬಂಧಿಸಿರೋದು ಮಾತ್ರ ಇಡಿ ಅಧಿಕಾರಿಗಳು. ತನಿಖೆಗೆ ಸಹಕಾರ ನೀಡಿಲ್ಲ ಅಂತಾ ಬಂಧಿಸಿರೋದಾಗಿ ಹೇಳುತ್ತಿದ್ದಾರೆ. ವಿಚಾರಣೆಗೆ ಸಹಕರಿಸಿದರೂ ಬಂಧಿಸಿರೋದು ಖಂಡನೀಯ ಎಂದರು.
ಕೇವಲ ಹೆಸರು ಬದಲಾಯಿಸೋದರಿಂದ ಕಲ್ಯಾಣ ಆಗೊಲ್ಲ:
ಹೈದ್ರಾಬಾದ್ ಕರ್ನಾಟಕ ಬದಲು ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಾಯಿಸಲು ಬಿಜೆಪಿ ಸರ್ಕಾರ ತೋರುತ್ತಿರುವ ಉತ್ಸುಕತೆಯನ್ನು ಈ ಭಾಗದ ಅಭಿವೃದ್ಧಿ ಕೆಲಸಗಳ ಬಗ್ಗೆ ತೋರುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇನ್ನು ಈ ಭಾಗದ ಜನರ ಒಂದು ಸಮಸ್ಯೆಗಾದ್ರೂ ಬಿಜೆಪಿ ಸ್ಪಂದಿಸಿದೆಯೇ ಎಂದು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ, ಹೈ.ಕ. ಭಾಗಕ್ಕೆ ಸಚಿವ ಸ್ಥಾನ ನೀಡುವಲ್ಲಿಯೂ ಅನ್ಯಾಯ, ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರ ನೇಮಕದಲ್ಲಿ ನಿರಾಸಕ್ತಿ, ತೋರುತ್ತಿದೆ. ಒಟ್ಟಾರೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದ ಬಗ್ಗೆ ಒಲವಿಲ್ಲ, ರಾಜ್ಯ ಸರ್ಕಾರಕ್ಕೆ ಹೈ.ಕ. ಅಭಿವೃದ್ಧಿ ಬಗ್ಗೆ ಆಸಕ್ತಿಯಿಲ್ಲ ಎಂದು ದೂರಿದರು.