ಕಲಬುರಗಿ: ಐದು ವರ್ಷದ ಬಳಿಕ ಕಲಬುರಗಿ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ನಡೆಯುತ್ತಿದೆ. ಐವರು ಅಭ್ಯರ್ಥಿಗಳ ಸ್ಪರ್ಧಿಸಿದ್ದು ಚುನಾವಣೆ ಕಾವು ಜೋರಾಗಿದೆ.
ಮೇ 9ರಂದು ನಡೆಯಲಿರುವ ಕಲಬುರಗಿ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳು ಸಿದ್ಧತೆ ಕೈಗೊಂಡಿದ್ದಾರೆ. ಹೇಗಾದರೂ ಮಾಡಿ ಕನ್ನಡ ಸಾಹಿತ್ಯ ಪರಿಷತ್ ಸ್ಥಾನ ತಮ್ಮದಾಗಿಸಿಕೊಳ್ಳಬೇಕೆಂದು ಐದು ಜನ ಅಭ್ಯರ್ಥಿಗಳು ಕಸರತ್ತು ನಡೆಸಿದ್ದಾರೆ.
ಪರಿಷತ್ ಹಾಲಿ ಅಧ್ಯಕ್ಷ ವೀರಭದ್ರ ಸಿಂಪಿ, ಮಾಜಿ ಗೌರವ ಕಾರ್ಯದರ್ಶಿ, ಉಪನ್ಯಾಸಕ ಪ್ರೊ. ಬಿ.ಎಚ್. ನೀರಗೂಡಿ, ಸಾಹಿತಿ ವಿಶ್ವನಾಥ ಭಕ್ರಿ, ಸಾಂಸ್ಕೃತಿಕ ಬಳಗದ ವಿಜಯಕುಮಾರ್ ತೆಗಲತಿಪ್ಪಿ, ದಲಿತ ಹೊರಾಟಗಾರ ಎ.ಬಿ. ಹೊಸಮನಿ ಅಖಾಡದಲ್ಲಿದ್ದಾರೆ. ಎಲ್ಲಾ ಅಭ್ಯರ್ಥಿಗಳು ಪ್ರವಾಸ ಕೈಗೊಂಡು ಮತಬೇಟೆ ಆರಂಭಿಸಿದ್ದಾರೆ.
ಹಾಲಿ ಅಧ್ಯಕ್ಷ ವೀರಭದ್ರ ಸಿಂಪಿ ಕಳೆದ ಬಾರಿಯ ಸಾಹಿತ್ಯ ಸೇವೆ ಪರಿಗಣಿಸಿ ಮತ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಉಪನ್ಯಾಸಕ ಬಿ.ಎಚ್. ನೀರಗೂಡಿ ಸ್ವಂತ ಕನ್ನಡ ಸಂಘದ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಕನ್ನಡ ಸಾಹಿತ್ಯ ಚಟುವಟಿಕೆಗಳನ್ನು ನಡೆಸುವ ಮೂಲಕ ಗಮನ ಸೆಳೆದಿರುವ ತೇಗಲತಿಪ್ಪಿ ಸಹ ತಮ್ಮದೇ ಆದ ಸಾಹಿತ್ಯಾಸಕ್ತರ ಗುಂಪು ಕಟ್ಟಿಕೊಂಡು ಪ್ರಚಾರದಲ್ಲಿ ತೊಡಗಿದ್ದಾರೆ.
ಇನ್ನು ಸಾಹಿತಿ ವಿಶ್ವನಾಥ ಭಕ್ರಿ ಹಾಗೂ ಎ.ಬಿ. ಹೊಸಮನಿ ಅವರು ತಮ್ಮ ವಯಕ್ತಿಕ ವರ್ಚಸ್ಸಿನ ಮೇಲೆ ಗೆಲುವಿಗೆ ಕಸರತ್ತು ನಡೆಸುತ್ತಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದಿದ್ರೆ ಈ ರೀತಿ ಮಾತನಾಡ್ತಿರಲಿಲ್ಲ: ಭೈರತಿ ಬಸವರಾಜ್
ಕಳೆದ ಬಾರಿ 11 ಸಾವಿರ ಮತದಾರರು ಮತದಾನ ಮಾಡಿದ್ದರು. ಈ ಬಾರಿ ಐದು ಸಾವಿರ ಮತದಾರರು ಹೆಚ್ಚಾಗಿದ್ದು, ಒಟ್ಟು 16,621 ಮತದಾರರು ಮತದಾನ ಪಟ್ಟಿಯಲಿದ್ದಾರೆ. ಇನ್ನು ಜಿಲ್ಲೆಯಾದ್ಯಂತ 23 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.