ಕಲಬುರಗಿ: ಹೊಸ ವರ್ಷಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲು ಕಲಬುರಗಿ ಖಾಕಿ ಪಡೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಡ್ರೋನ್ ಕ್ಯಾಮರಾ ಬಳಕೆಗೆ ಮುಂದಾಗಿದೆ.
ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಡ್ರೋನ್ ಕ್ಯಾಮರಾಗಳು ಬರೋಬ್ಬರಿ ಐದು ಕಿ.ಮಿ ವರೆಗೆ ಹಾರಾಟ ಮಾಡಲಿವೆ. ಎತ್ತರದಲ್ಲಿ ಹಾರುವ ಡ್ರೋನ್ ಸದ್ದು ಕೂಡಾ ಜನರಿಗೆ ಕೇಳುವದಿಲ್ಲ. ಹಗಲು ಮಾತ್ರವಲ್ಲ ರಾತ್ರಿ ಕತ್ತಲು ಇದ್ದರೂ ಸೂಕ್ಷ್ಮತೆಗಳು ಕಾಣುವ ಹಾಗೆ ಅತ್ಯಾಧುನಿಕ ಕ್ಯಾಮರಾ ಅಳವಡಿಸಲಾಗಿದ್ದು, ಖಾಕಿ ಪಡೆ ಕುಳಿತಲ್ಲಿಯೇ ಡ್ರೋನ್ ಮೂಲಕ ಜನರ ಮೇಲೆ ಕಣ್ಣಿಡಲಿದ್ದಾರೆ. ಏನಾದರೂ ಅಹಿತಕರ ಘಟನೆಗಳು ಕಂಡುಬಂದರೆ ಕೂಡಲೇ ಸ್ಥಳಕ್ಕೆ ಪೊಲೀಸರು ದೌಡಾಯಿಸಲಿದ್ದಾರೆ ಎಂದು ಎಸಿಪಿ ದೀಪನ್ ಎಮ್.ಎನ್ ಹೇಳಿದರು.
ಹೊಸವರ್ಷ ಸಂಭ್ರಮಾಚರಣೆ ಹೆಸರಿನಲ್ಲಿ ಬಯಲು ಪ್ರದೇಶಗಳಲ್ಲಿ ಕುಡಿಯೋದು, ಬೈಕ್ ರೈಡಿಂಗ್, ಗಲಾಟೆ ಮಾಡೋದು, ಗುಂಪುಕಟ್ಟಿಕೊಂಡು ಓಡಾಡುವದು, ಸಾರ್ವಜನಿಕ ಪ್ರದೇಶಗಳಲ್ಲಿ ಜನರಿಗೆ ತೊಂದರೆ ಆಗುವಂತೆ ವರ್ತಿಸೋದು ಸೇರಿದಂತೆ ಕಾನೂನು ಚೌಕಟ್ಟು ಮೀರಿ ನಡೆಯುವವರ ಬಗ್ಗೆ ಡ್ರೋನ್ ಮೂಲಕ ಪತ್ತೆ ಮಾಡಲಾಗುವುದಾಗಿ ದೀಪನ್ ತಿಳಿಸಿದ್ದಾರೆ.
ನಗರದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶಗಳಲ್ಲಿ ಡ್ರೋನ್ ಓಡಾಡಲಿವೆ. ಹೊಸ ವರ್ಷಕ್ಕೆ ಮಾತ್ರವಲ್ಲ ಮುಂದೆಯೂ ನಿರಂತರವಾಗಿ ಅಪರಾಧ ತಡೆಯಲು ಡ್ರೋನ್ ಬಳಕೆ ಮಾಡಲು ಯೋಜನೆ ರೂಪಿಸಲಾಗಿದೆ. ಡ್ರೋನ್ಗಳಿಗೆ ಸೆನ್ಸಾರ್ ಅಳವಡಿಸಲಾಗಿದ್ದು, ಕಟ್ಟಡ ಅಥವಾ ಮರ ಗುಡ್ಡಗಳಿಗೆ ಡಿಕ್ಕಿ ಹೊಡೆಯುವುದಿಲ್ಲ, ಎಸಿಪಿ ಹೇಳಿದ್ದಾರೆ.
ಇದನ್ನೂ ಓದಿ: ಹೊಸ ವರ್ಷಾಚರಣೆಗೆ ಕ್ಷಣಗಣನೆ.. 2023 ನ್ನು ಸ್ವಾಗತಿಸಲು ಬೆಂಗಳೂರಿನಲ್ಲಿ ಸಜ್ಜಾದ ಜನಸಾಗರ