ಕಲಬುರಗಿ: ವಾಡಿ ಪಟ್ಟಣದ ಎರಡು ವರ್ಷದ ಬಾಲಕನಲ್ಲಿ ಕೊರೊನಾ ಪಾಸಿಟಿವ್ ಖಚಿತವಾಗಿದ್ದು ಚಿಕಿತ್ಸೆ ನೀಡಿದ 9 ವೈದ್ಯರನ್ನು ಹೋಮ್ ಕ್ವಾರಂಟೈನ್‌ಗೆ ಕಳುಹಿಸಲಾಗಿದೆ.
ಮನೆಯಲ್ಲಿ ಆಟವಾಡುತ್ತಿದ್ದ ಬಾಲಕ ಬಿದ್ದು ಕಾಲು ಮುರಿಕೊಂಡಿದ್ದ. ನಂತರ ಆತನನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಈ ನಡುವೆ ಬಾಲಕನಿಗೆ ಜ್ವರ ಕಾಣಿಸಿಕೊಂಡಿದೆ. ಜೊತೆಗೆ ಬಾಲಕನ ತಂದೆ ಉತ್ತರ ಪ್ರದೇಶ ಮೂಲದವರಾಗಿದ್ದು, ರೈಲ್ವೆಯಲ್ಲಿ ಬಿಸ್ಕಟ್ ಮಾರಾಟ ಮಾಡುತ್ತಿದ್ದರಂತೆ. ಈ ವಿಷಯ ತಿಳಿದು ಮುಂಜಾಗೃತಾ ಕ್ರಮವಾಗಿ ಬಾಲಕನ ಗಂಟಲು ದ್ರವವನ್ನು ಪರಿಕ್ಷೆಗೆ ರವಾನಿಸಲಾಗಿತ್ತು.
ಇದೀಗ ವರದಿ ಬಂದಿದೆ. ಬಾಲಕನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದು ಕಾಲು ಮುರಿತಕ್ಕೆ ಚಿಕಿತ್ಸೆ ನೀಡಿದ್ದ ವೈದ್ಯ ಸಿಬ್ಬಂದಿಯಲ್ಲಿ ಆತಂಕ ಸೃಷ್ಟಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಬಾಲಕನಿಗೆ ಚಿಕಿತ್ಸೆ ನೀಡುವಾಗ ಉಪಸ್ಥಿತರಿದ್ದ ಮೂವರು ವೈದ್ಯರು ಹಾಗೂ ಅವರೊಂದಿಗಿದ್ದ ಆರು ಜೂನಿಯರ್ ವೈದ್ಯರು ಸೇರಿದಂತೆ ಒಟ್ಟು 9 ಜನರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ.
ಬರ್ತ್‌ಡೇ ಪಾರ್ಟಿ ಮಾಡಿ ಕೇಕ್ ತಿಂದವರಲ್ಲಿ ಆತಂಕ:
ಮಗುವಿಗೆ ಕೊರೊನಾ ಇರುವುದು ದೃಢಪಟ್ಟ ಹಿಂದಿನ ದಿನದ ರಾತ್ರಿ ವೈದ್ಯರೊಬ್ಬರು ಮಗುವಿನ ಸ್ವಾಬ್ ಟೆಸ್ಟಿಂಗ್ ಮಾಡಿದ್ದರು. ಬಳಿಕ ಅದೇ ದಿನ ರಾತ್ರಿ ಸಹ ಸಿಬ್ಬಂದಿಯೊಂದಿಗೆ ತಮ್ಮ ಹುಟ್ಟು ಹಬ್ಬ ಆಚರಣೆ ಮಾಡುಕೊಂಡಿದ್ದರು. ಇದೀಗ ಮಗುವಿಗೆ ಕೊರೊನಾ ದೃಢಪಟ್ಟಿದ್ದು ಬರ್ತ್‌ಡೇ ಆಚರಣೆಯಲ್ಲಿ ಭಾಗಿಯಾಗಿದ್ದ ಸುಮಾರು 25 ಕ್ಕೂ ಹೆಚ್ಚು ಜನರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ.