ಕಲಬುರಗಿ: ಅದೊಂದು ಪುಟ್ಟ ಗ್ರಾಮವಾದರು ಆರಾಧ್ಯ ದೈವ ಮೈಲಾರಲಿಂಗ ದೇವರ ಜಾತ್ರೆ ನಿಬ್ಬೇರಗಾಗಿಸುವಂತಿತ್ತು. ಗ್ರಾಮಕ್ಕೆ ಗ್ರಾಮವೇ ಭಂಡಾರಮಯವಾಗಿತ್ತು. ಊರಿನ ಎಲ್ಲರೂ ಸೇರಿ ಹೊಳೆಗೆ ಹೋಗಿ ಬೆಳ್ಳಿ ಕುದುರೆಗೆ ಸ್ನಾನ ಮಾಡಿಸಿ ತರುವುದು, ಏಳುಕೋಟಿ, ಏಳುಕೋಟಿ, ಏಳುಕೋಟಿ ಗೇ ಎಂಬ ಜಯಘೋಷ ಹಾಕುತ್ತ, ಸರಪಳಿ ಹರಿಯುವ ದೃಶ್ಯಗಳು ಮೈನವಿರೇಳಿಸುವಂತಿತ್ತು. ಭಂಡಾರದ ಒಡೆಯ ಮೈಲಾರಲಿಂಗ ಜಾತ್ರೆ ನೋಡಲು ಎರಡು ಕಣ್ಣುಗಳು ಸಾಲದಾಗಿತ್ತು. ಇಷ್ಟೊಂದು ಸಂಭ್ರಮ ಸಡಗರಕ್ಕೆ ಸಾಕ್ಷಿಯಾಗಿದ್ದು ಕಲಬುರಗಿ ಜಿಲ್ಲೆಯ ಅಲ್ಲೂರ ಗ್ರಾಮ.
ಉತ್ತರ ಕರ್ನಾಟಕ ಭಾಗದಲ್ಲಿ ಭಂಡಾರದ ಒಡೆಯ ಮೈಲಾರಲಿಂಗ ಪ್ರಸಿದ್ಧವಾದ ದೇವರು. ಹಲವರ ಮನೆ ದೇವರು ಕೂಡಾ ಮಲಯ್ಯ ಆಗಿದ್ದಾನೆ. ಹಲವಡೆ ಮಲಯ್ಯನ ದೇವಸ್ಥಾನಗಳಿವೆ. ಆದರೆ, ಚಿತ್ತಾಪುರ ತಾಲೂಕಿನ ಅಲ್ಲೂರ ಗ್ರಾಮ ಚಿಕ್ಕದಾದರೂ ಮಲಯ್ಯನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದೆ. ಇಲ್ಲಿನ ಮೈಲಾರಲಿಂಗ ದೇವರ ಜಾತ್ರೆ ವಿಶಿಷ್ಠವಾಗಿ ನೇರವೆರಿತು. ಭಕ್ತರ ಜೈಕಾರ, ಭಂಡಾರ ಚೆಲ್ಲಾಟ, ಸರಪಳಿ ಹರಿಯುವುದು ಜಾತ್ರೆಯಲ್ಲಿ ಕಂಡು ಬಂದಿತ್ತು. ಪ್ರತಿವರ್ಷದಂತೆ ಈ ವರ್ಷ ಕೂಡಾ ಗ್ರಾಮದಲ್ಲಿ ಮೈಲಾರಲಿಂಗೇಶ್ವರ ದೇವಸ್ಥಾನ ಭಂಡಾರದ ಓಕಳಿ ಜಾತ್ರೆ ಅದ್ದೂರಿಯಾಗಿ ನೆರವೇರಿತು. ಸಾವಿರಾರು ಮಂದಿ ಭಂಡಾರದಲ್ಲಿ ಮಿಂದೆಂದು ಸಂಭ್ರಮಿಸಿದರು.
ಮಲ್ಲಯ್ಯನ ಬೆಳ್ಳಿಯ ಕುದುರೆಗಳಿಗೆ ಗಂಗಾಸ್ನಾನ: ಮಲ್ಲಯ್ಯನ ಬೆಳ್ಳಿಯ ಕುದುರೆಗಳಿಗೆ ಗ್ರಾಮದ ಹೊರಗೆ ಇರುವ ಹೊಳೆಗೆ ಕರೆದೊಯ್ದು ಗಂಗಾಸ್ನಾನ ಮಾಡಿಸಿದ ಗ್ರಾಮಸ್ಥರು ತಾವೂ ಕೂಡಾ ಅಲ್ಲಿಯೇ ಪುಣ್ಯ ಸ್ನಾನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ಹೊಳೆಯಿಂದ ದೇಗುಲವರೆಗೆ ವಾದ್ಯ ಮೇಳದೊಂದಿಗೆ ಮೆರವಣಿಗೆ ಮಾಡಲಾಯಿತು. ದೇವರ ಪಲ್ಲಕ್ಕಿ ಬೆಳ್ಳಿ ಕುದುರೆಗಳನ್ನು ಕರೆತಂದು ದೇಗುಲದಲ್ಲಿ ರುದ್ರಾಭಿಷೇಕ ಮಾಡಿ ಕರಿಬಸವೇಶ್ವರ ಮಂದಿರವರೆಗೆ ಭವ್ಯವಾದ ಮೇರವಣಿಗೆ ಮಾಡಲಾಯಿತು. ಮೆರವಣಿಗೆ ಉದ್ದಕ್ಕೂ ಡೊಳ್ಳು ಕುಣಿತ, ಭಂಡಾರ ಎರಚಿ ಏಳುಕೋಟಿ, ಏಳುಕೋಟಿ, ಏಳುಕೋಟಿ ಗೇ ಎಂಬ ಜಯಘೋಷ ಕೂಗಿ ಭಕ್ತಿ ಸಮರ್ಪಿಸಿದರು.
ಸರಪಳಿ ತುಂಡರಿಸಿದ ದೇಗುಲದ ಅರ್ಚಕ ಮಲ್ಲಪ್ಪ ಬೋಳಿ: ಸುತ್ತಮುತ್ತಲಿನ ಗ್ರಾಮಸ್ಥರು ಮಲ್ಲಯ್ಯನ ದರ್ಶನ ಪಡೆದು ಜಾತ್ರೆಯಲ್ಲಿ ಪಾಲ್ಗೊಂಡರು. ಪ್ರತಿವರ್ಷದಂತೆ ಸಾಂಪ್ರದಾಯಿಕ ಆಚರಣೆಯಾದ ಸರಪಳಿ ಹರಿಯುವ ಕಾರ್ಯಕ್ರಮ ನೋಡಲು ಜನಸ್ತೋಮ ತುಂಬಿತ್ತು. ಅಪಾರ ಸಂಖ್ಯೆಯಲ್ಲಿ ಸೇರಿದ ಭಕ್ತಗಣ ಮದ್ಯೆ ಭಂಡಾರ ಒಡೆಯನ ಜಾತ್ರೆ ಪ್ರತೀಕವಾದ ಸರಪಳಿ ತುಂಡರಿಸಲಾಯಿತು. ದೇಗುಲದ ಅರ್ಚಕ ಮಲ್ಲಪ್ಪ ಬೋಳಿ ಸರಪಳಿ ತುಂಡರಿಸಿದರು. ಭಂಡಾರ ಎರಚ್ಚುತ್ತ ಜೈ ಘೋಷ ಹಾಕುತ್ತ. ಸರಪಳಿ ತುಂಡರಿಸುವ ದೃಶ್ಯವನ್ನು ಭಕ್ತರು ಕಣ್ತುಂಬಿಕೊಂಡರು.
ದೇವರ ಬೆಳ್ಳಿ ಕುದುರೆಗಳು ಗರ್ಭಗುಡಿ ಪ್ರವೇಶಿಸುವ ಮೂಲಕ ಜಾತ್ರೆಗೆ ತೆರೆ: ಸರಪಳಿ ತುಂಡರಿಸಿದ ಬಳಿಕ ಮಲ್ಲಯ್ಯನ ಪಲ್ಲಕ್ಕಿ, ದೇವರ ಬೆಳ್ಳಿ ಕುದುರೆಗಳು ಗರ್ಭಗುಡಿ ಪ್ರವೇಶಿಸುವ ಮೂಲಕ ಜಾತ್ರೆಗೆ ತೆರೆ ಎಳೆಯಲಾಯಿತು. ಗ್ರಾಮದ ಜನರು, ಸುತ್ತಮುತ್ತಲಿನ ಗ್ರಾಮಸ್ಥರೆಲ್ಲರೂ ಒಟ್ಟಾಗಿ ಭಕ್ತಿ ಭಾವದಿಂದ ಜಾತ್ರೆ ನೇರವೆರಿಸಿ, ದೇವರ ಕೃಪೆಗೆ ಪಾತ್ರರಾದರು.
ಇದನ್ನೂ ಓದಿ:ಕಲ್ಯಾಣ ಕರ್ನಾಟಕದಲ್ಲಿ ಮೋದಿ: ಐತಿಹಾಸಿಕ ಕ್ಷಣ ಸೃಷ್ಟಿಸಿದ ಹಕ್ಕುಪತ್ರ ವಿತರಣೆ ಕಾರ್ಯಕ್ರಮ