ಕಲಬುರಗಿ: ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಮಸೂದೆ ತಿದ್ದುಪಡಿಗೆ ಖಂಡಿಸಿ ಹಾಗೂ ಪ್ರವಾಹದಿಂದಾಗಿ ಮುಳುಗಡೆಯಾದ ಪ್ರದೇಶಗಳಿಗೆ ಪುನರ್ ವಸತಿ ಕೇಂದ್ರ ಮಂಜೂರು ಮಾಡುವಂತೆ ಆಗ್ರಹಿಸಿ ರಸ್ತಾ ರೋಖೋ ಚಳವಳಿ ನಡೆಸುತ್ತಿರುವ ವೇಳೆ 50ಕ್ಕೂ ಅಧಿಕ ರೈತ ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ.
ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ನಗರದ ಜಗತ್ ವೃತ್ತದಲ್ಲಿ ರಸ್ತೆ ತಡೆಗೆ ಮುಂದಾದ ರೈತ ಹೋರಾಟಗಾರರನ್ನು ಪೊಲೀಸರು ಬಂಧಿಸಿ ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಮಳೆ ಬಂದ 24 ಗಂಟೆಯಲ್ಲಿ 25 ಸಾವಿರ ರೂ. ಪರಿಹಾರ ತಕ್ಷಣ ಘೋಷಿಸಲಾಗುತ್ತೆ. ಆದರೆ, ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಬಾರಿ ಅತಿಯಾದ ಮಳೆ ಹಾಗೂ ಭೀಕರ ಪ್ರವಾಹದಿಂದ ಜನ ನಲುಗಿ ಹೋದರೂ ಕಾಟಾಚಾರಕ್ಕೆ ವೈಮಾನಿಕ ಸಮೀಕ್ಷೆ ನಡೆಸಿ ಕೇವಲ 10 ಸಾವಿರ ರೂಪಾಯಿ ಘೋಷಣೆ ಮಾಡಲಾಗಿದೆ. ಅದು ಕೂಡಾ ಸಂತ್ರಸ್ತರ ಕೈ ತಲುಪಿಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಪರಿಹಾರ ಘೋಷಣೆಯಲ್ಲೂ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸರ್ಕಾರ ಈ ಮಲತಾಯಿ ಧೋರಣೆಯನ್ನು ಕೈಬಿಟ್ಟು ಕೂಡಲೇ ಅತಿವೃಷ್ಟಿಗೆ ತುತ್ತಾದ ಪ್ರದೇಶದಲ್ಲಿ ಹಾನಿ ಸರ್ವೆ ನಡೆಸಿ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ಘೋಷಿಸಬೇಕು. ಅತಿವೃಷ್ಟಿ ಹಾನಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಹಾಗೂ ಪ್ರವಾಹ ಸಂತ್ರಸ್ತರಿಗೆ ಪರಿಹಾರದ ಜೊತೆಗೆ ಪುನರ್ ವಸತಿ ಕೇಂದ್ರ ಮಂಜೂರು ಮಾಡುವಂತೆ ಆಗ್ರಹಿಸಿದರು. ಈ ವೇಳೆ, ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.
ಎಪಿಎಂಸಿ ಕಾಯ್ದೆ ಹಾಗೂ ವಿದ್ಯುತ್ ಬಿಲ್ ತಿದ್ದುಪಡಿಗೆ ವಿರೋಧ: ಈಗಾಗಲೇ ಎಪಿಎಂಸಿ ಹಾಗೂ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಿದೆ. ಇದೀಗ ವಿದ್ಯುತ್ ಬಿಲ್ ತಿದ್ದುಪಡಿ ಮಾಡಿ ರೈತರ ಮರಣ ಶಾಸನ ಬರೆಯಲು ಹೊರಟಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು. ಕೂಡಲೇ ರೈತ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆ ಕೈ ಬಿಡುವಂತೆ ಹಾಗೂ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವಂತೆ ಆಗ್ರಹಿಸಿದರು.
ಪೊಲೀಸರ ಕ್ರಮಕ್ಕೆ ಆಕ್ರೋಶ: ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ವಿರೋಧ ವಿದ್ಯುತ್ ಮಸೂದೆ ತಿದ್ದುಪಡಿಗ ಖಂಡಿಸಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ರಸ್ತೆ ತಡೆಗೆ ಮುಂದಾದ ಸಮಿತಿ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಎ.ಐ.ಕೆ.ಎಸ್ ಮುಖಂಡರಾದ ಮೌಲಾ ಮುಲ್ಲಾ, ಭೀಮಾಶಂಕರ ಮಾಡುಯಾಳ, ಮಹೇಶ್ ಸೇರಿ ಹಲವು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು. ರಸ್ತೆ ತಡೆ ಮುಂದುವರಿಸಿದಾಗ ಪೊಲೀಸರು ಬಲವಂತವಾಗಿ ಹೋರಾಟಗಾರರನ್ನು ಎಳೆದೊಯ್ದಿದ್ದಾರೆ. ಪೊಲೀಸರ ಈ ಕ್ರಮಕ್ಕೆ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.