ಸೇಡಂ: ವಿನಾಕಾರಣ ಗ್ರಾಮ ಪಂಚಾಯತಿಗಳಿಗೆ ಸಂಘ ಸಂಸ್ಥೆಗಳ ಹೆಸರಲ್ಲಿ ಬ್ಲಾಕ್ ಮೇಲ್ ಮಾಡಿದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಖಡಕ್ ಎಚ್ಚರಿಕೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ನರೇಗಾ ಅಭಿವೃದ್ಧಿ ಕಾರ್ಯಗಳು ಮತ್ತು ಕುಡಿಯುವ ನೀರಿನ ಸಮಸ್ಯೆಗಳ ಕುರಿತು ನಡೆದ 27 ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ನರೇಗಾ ಯೋಜನೆಯನ್ನು ಸಮರೋಪಾದಿಯಲ್ಲಿ ಮುನ್ನಡೆಸುವ ಮೂಲಕ ರಾಜ್ಯದಲ್ಲೇ ಸೇಡಂ ಮೊದಲ ಸ್ಥಾನದಲ್ಲಿ ನಿಲ್ಲಿಸುವ ಜವಾಬ್ದಾರಿ ಪ್ರತಿಯೊಬ್ಬ ಗ್ರಾ.ಪಂ. ಅಧಿಕಾರಿಗಳ ಮೇಲಿದೆ. ವಿವಿಧ ರಾಜ್ಯಗಳಿಂದ ನೂರಾರು ಜನ ಕಾರ್ಮಿಕರು ಸ್ವಗ್ರಾಮಗಳತ್ತ ಬರುತ್ತಿದ್ದು, ನರೇಗಾದ ಮೂಲಕ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆಯಬೇಕು.
14ನೇ ಹಣಕಾಸು ಯೋಜನೆಯನ್ನು ಸಂಪೂರ್ಣವಾಗಿ ಕುಡಿಯುವ ನೀರಿಗಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ನೀರು ಒದಗಿಸುವ ನಿಟ್ಟಿನಲ್ಲಿ ನಿರ್ಲಕ್ಷ್ಯವಹಿಸುವ ಪಿಡಿಒಗಳನ್ನು ಅಂದೇ ವಜಾಗೊಳಿಸುವಂತೆ ತಾ.ಪಂ. ಇಒ ಮತ್ತು ತಹಸೀಲ್ದಾರರಿಗೆ ಶಾಸಕ ತೇಲ್ಕೂರ ಸೂಚಿಸಿದರು.
ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ಗ್ರಾಮಗಳ ವ್ಯಾಪ್ತಿಯಲ್ಲಿನ ಶಾಲೆಗಳಲ್ಲಿ ವಿವಿಧ ರಾಜ್ಯಗಳಿಂದ ಬಂದ ಕಾರ್ಮಿಕರನ್ನು ಇರಿಸಲಾಗಿದೆ. ಕ್ವಾರಂಟೈನನಲ್ಲಿರುವವರು ಬೇಕಾಬಿಟ್ಟಿ ತಿರುಗಾಡದಂತೆ ಎಚ್ಚರವಹಿಸಬೇಕು. ಈ ಬಗ್ಗೆ ತಹಶೀಲ್ದಾರ ಮತ್ತು ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಶೌಚಾಲಯ ಒಳಗೊಂಡು ಮೂಲಭೂತ ಸೌಕರ್ಯವನ್ನು ನರೇಗಾದಡಿ ಕಲ್ಪಿಸಬೇಕು ಎಂದರು.
ತಾ.ಪಂ. ಇಒ ಗುರುನಾಥ ಶೆಟಗಾರ ಮಾತನಾಡಿ, ತಾಲೂಕಿನ ನೀಲಹಳ್ಳಿ ಗ್ರಾಮದಲ್ಲಿನ ಸರ್ಕಾರ ಶಾಲೆಗೆ ಐದು ವರ್ಷಗಳ ಹಿಂದೆ ಬಿಸಿಯೂಟ ಕೋಣ ನಿರ್ಮಾಣಕ್ಕಾಗಿ 5 ಲಕ್ಷ ರೂ ಮಂಜೂರು ಮಾಡಲಾಗಿತ್ತು. ಆ ಹಣ ಯಾರು ನುಂಗಿದ್ದಾರೆ ಗೊತ್ತಿಲ್ಲ. ಈಗ ಅದೇ ಕಾಮಗಾರಿ ಮಾಡಬೇಕಾರೆ ಕನಿಷ್ಠ 15 ಲಕ್ಷ ರೂ ಬೇಕು. ಇದಕ್ಕೆ ಯಾರು ಜವಾಬ್ದಾರಿ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಮಾಧವ ರೆಡ್ಡಿ ಅತಿಥಿ ಶಿಕ್ಷಕರ ವೇತನವಾಗಲಿ, ಕಟ್ಟಡ ನಿರ್ಮಾಣದ ವಿಷಯವಾಗಲಿ, 10 ರೂ. ಲಂಚ ಪಡೆದರೂ ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಖಾರವಾಗಿ ಉತ್ತರಿಸಿದರು.
ಸರ್ಕಾರ ಲಾಕ್ಡೌನ್ ವಿನಾಯಿತಿ ನೀಡಿದ್ದರೂ ಸಹ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಸೂಚಿಸಿದೆ. ಆದರೆ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಮತ್ತು ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ ಸಮಕ್ಷಮ ನಡೆದ ಅಧಿಕಾರಿಗಳ ಸಭೆಯಲ್ಲಿ ಸಾಮಾಜಿಕ ಅಂತರ ಮರೆಯಾಗಿತ್ತು.