ಸೇಡಂ: ಪ್ರವಾಹಕ್ಕೆ ತುತ್ತಾದ ಪ್ರದೇಶಗಳಿಗೆ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಭೇಟಿ ನೀಡಿ, ಸಂತ್ರಸ್ತರಿಗೆ ಧೈರ್ಯ ತುಂಬಿದರು. ಅಲ್ಲದೆ ನಷ್ಟ ಅನುಭವಿಸಿದವರಿಗೆ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.
ಪಟ್ಟಣದ ಪೊಲೀಸ್ ಠಾಣೆ, ಮುಖ್ಯ ರಸ್ತೆ, ಬಸನಗರ, ಇಂದಿರಾನಗರ, ವಿದ್ಯಾನಗರ, ದೊಡ್ಡ ಅಗಸಿ, ಸಣ್ಣ ಅಗಸಿ, ಕೊತ್ತಲ ಬಸವೇಶ್ವರ ದೇವಾಲಯ, ಊಡಗಿ ರಸ್ತೆ ಬಟಗೇರಾ ಕ್ರಾಸ್, ಬಟಗೇರಾ ಗ್ರಾಮದ ಸಿದ್ದಾರ್ಥ ನಗರಗಳಿಗೆ ಭೇಟಿ ನೀಡಿದ ಅವರು, ನಿರಾಶ್ರಿತರಿಗೆ ಸೌಕರ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬಸನಗರ ಬಡಾವಣೆಯಲ್ಲಿ ಹೆಚ್ಚಿನ ಆಶ್ರಯ ಮನೆಗಳನ್ನು ಕಲ್ಪಿಸುವ ಸಂಬಂಧ ಕ್ರಮ ಕೈಗೊಳ್ಳಲಾಗುವುದು. ಇನ್ನು ಮನೆಗಳ ಜಿಪಿಎಸ್ ಅಳವಡಿಕೆ ಕೈಬಿಟ್ಟು, ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಸೌಕರ್ಯ ಕಲ್ಪಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಸತೀಶ ಗುಡ್ಡೆ ಅವರಿಗೆ ಸೂಚಿಸಿದರು.
ಈ ವೇಳೆ ಅವರೊಂದಿಗೆ ಸಹಾಯಕ ಆಯುಕ್ತ ರಮೇಶ ಕೋಲಾರ, ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ, ಸಿಪಿಐ ರಾಜಶೇಖರ ಹಳಗೋದಿ, ಪಿಎಸ್ಐ ಸುಶೀಲಕುಮಾರ, ಉಪ ತಹಸೀಲ್ದಾರ ನಾಗನಾಥ ತರಗೆ, ಪುರಸಭೆ ಮುಖ್ಯಾಧಿಕಾರಿ ಸತೀಶ ಗುಡ್ಡೆ ಇದ್ದರು.