ಕಲಬುರಗಿ: ಭೀಮೆಯ ರೌದ್ರ ನರ್ತನಕ್ಕೆ ಕಲಬುರಗಿ ಜನ ಅಕ್ಷರಶಃ ನಲುಗಿ ಹೋಗಿದ್ದಾರೆ. ಪ್ರವಾಹ ಪೀಡಿತ ಸ್ಥಳಕ್ಕೆ ಕಂದಾಯ ಸಚಿವ ಆರ್.ಅಶೋಕ್ ಭೇಟಿ ನೀಡಿದ್ದು, ಕಾಟಾಚಾರಕ್ಕೆ ಬಂದಂತೆ ಭಾಸವಾಗುತ್ತಿದೆ ಎಂದು ಕಲಬುರಗಿ ಜನ ಆರೋಪಿಸಿದ್ದಾರೆ.
ನಿನ್ನೆ ಬೆಳಗ್ಗೆ 10 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಚಿವರು, ಕಲಬುರಗಿ ನಗರದ ಸಮಿಪದಲ್ಲೇ ಇರುವ ತಾಜ್ ಕೋಟನೂರ್ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿಂದ ನೇರವಾಗಿ ಕಲಬುರಗಿ ತಾಲೂಕಿನ ಸೈಯದ್ ಚಿಂಚೋಳಿಗೆ ಆಗಮಿಸಿ ಅಲ್ಲಿನ ಪ್ರವಾಹದ ಕೆರೆ ವೀಕ್ಷಿಸಿದರು. ಬಳಿಕ ಪಕ್ಕದಲ್ಲೇ ಇದ್ದ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಕೇವಲ 20 ನಿಮಿಷದಲ್ಲೇ ಅಲ್ಲಿದ್ದ ಪ್ರವಾಹ ಸಂತ್ರಸ್ತರನ್ನು ಭೇಟಿಯಾಗಿ ಅಹವಾಲು ಸ್ವೀಕರಿಸಿ ಹೊರಟು ಹೋಗಿದ್ದಾರೆ. ಕಲಬುರಗಿ ತಾಲೂಕಿನ ಫೀರೊಜಾಬಾದ್ ಗ್ರಾಮದ ನೆರೆ ವೀಕ್ಷಣೆ ಮಾಡಿ, ಯಾದಗಿರಿಗೆ ತೆರಳಿದರು. ಇನ್ನುಳಿದ ಚಿತ್ತಾಪುರ, ಅಫಜಲಪುರ ಬರ ಪೀಡಿತ ಪ್ರದೇಶಗಳಿಗೆ ಭೇಟಿ ಮಾಡದೆ ಸಚಿವರು ಹೊರಟು ಹೋಗಿರುವುದು ಚಿತ್ತಾಪುರ ಹಾಗೂ ಅಫಜಲಪುರದ ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡದ ಸ್ಥಳೀಯ ಶಾಸಕರು, ಸಚಿವರ ವಿರುದ್ಧ ನೆರೆ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ನಾಲ್ಕೈದು ದಿನಗಳಿಂದ ವಿಪರೀತ ಮಳೆ ಸುರಿಯುತ್ತಿದೆ. ಇನ್ನೊಂದೆಡೆ ಭೀಮಾ, ಕಾಗಿಣಾ ನದಿಯಿಂದ ಪ್ರವಾಹ ಬಂದಿದೆ. ಇಲ್ಲಿನ ಜನ, ರೈತರು ಇಷ್ಟೆಲ್ಲಾ ಕಷ್ಟ ಅನುಭವಿಸುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾತ್ರ ಭೇಟಿ ನೀಡಿಲ್ಲ. ಕೇಳಿದರೆ ಕೊರೊನಾ ಪಾಸಿಟಿವ್ ನೆಪ ಹೇಳುವ ಮೂಲಕ ಶಿರಾ ಹಾಗೂ ತುಮಕೂರು ಬೈ ಎಲೆಕ್ಷನ್ ಚುನಾವಣೆಯಲ್ಲಿ ಕಾಣಿಸಿಕೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಒಂದೆಡೆ ಮಳೆ, ಇನ್ನೊಂದೆಡೆ ನೆರೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಕಲಬುರಗಿ ಜನರ ಗೋಳು ಮಾತ್ರ ಹೇಳತೀರದಾಗಿದೆ. ಜನಪ್ರತಿನಿಧಿಗಳ ಈ ನಡೆಗೆ ನೆರೆ ಸಂತ್ರಸ್ತರು ಹಿಡಿಶಾಪ ಹಾಕುತ್ತಿದ್ದಾರೆ.