ಕಲಬುರಗಿ: ಈ ವರ್ಷ ಶೂ-ಸಾಕ್ಸ್ ಕೊಡ್ತಿರೋ ಇಲ್ವೋ ಎಂಬ ಪ್ರಶ್ನೆಗೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ ನಾಗೇಶ್ ಮಾಧ್ಯಮದವರ ಪ್ರಶ್ನೆಗಳಿಗೆ ಹಾರಿಕೆ ಉತ್ತರ ನೀಡಿದ್ದಾರೆ.
ಸರ್ಕಾರ ಮಕ್ಕಳಿಗೆ ಶೂ- ಸಾಕ್ಸ್ ಸ್ಥಗಿತಗೊಳಿಸಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಬಿ. ಸಿ ನಾಗೇಶ್ ಸಿಡಿಮಿಡಿಗೊಂಡರು. ಸಿದ್ದರಾಮಯ್ಯ ಏನು ಸರ್ಕಾರನಾ? ಅವರು 100 ಸುಳ್ಳು ಹೇಳುವುದರಲ್ಲಿ ಇದು 101 ನೇ ಸುಳ್ಳು ಅಷ್ಟೇ. ಮಕ್ಕಳು ಶಾಲೆಗೆ ಬರುವುದು ಶಿಕ್ಷಣಕ್ಕಾಗಿ. ಅವರ ಅವಧಿಯಲ್ಲಿ ಕ್ವಾಲಿಟಿ ಎಜುಕೇಶನ್ ಎಷ್ಟರ ಮಟ್ಟಿಗೆ ಕೊಟ್ಟಿದ್ದಾರೆ ಕೇಳಿ. ಕಲಿಕಾ ಚೇತರಿಕೆಗೆ 146 ಕೋಟಿ ರೂ. ಖರ್ಚು ಮಾಡಿದ್ದೆವು. ಕೊರೊನಾದಿಂದ ಆರ್ಥಿಕ ಹೊಡೆತ ಬಿದ್ದಿದೆ. ಶೂ- ಸಾಕ್ಸ್ ಕೊಡೋಕೆ ಆಗಲ್ಲ ಅಂತಾ ನಾವು ಎಲ್ಲೂ ಹೇಳಿಲ್ಲ. ಶೂ ಸಾಕ್ಸ್‌ಗಿಂತ ನಾವು ಗುಣಮಟ್ಟದ ಶಿಕ್ಷಣಕ್ಕೆ ಒತ್ತುಕೊಟ್ಟಿದ್ದೇವೆ ಎಂದರು.
ಶೂ- ಸಾಕ್ಸ್ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ. ನೀವು ಎಷ್ಟೇ ಸಲ ಪ್ರಶ್ನೆ ಕೇಳಿದ್ರು ನಾ ಹೇಳೊದೊಂದೆ. ಇನ್ನೂ ಏನೂ ನಿರ್ಣಯ ತಗೊಂಡಿಲ್ಲ, ತಗೊಂಡಿಲ್ಲ ಅಂತಾ ಸುಮಾರು ಹತ್ತು ಬಾರಿ ಹೇಳಿದ್ರು.
ಶಿಕ್ಷಣ ಇಲಾಖೆ ಬಗ್ಗೆನೇ ಮಾಹಿತಿ ಇಲ್ಲವೆಂದ ಶಿಕ್ಷಣ ಸಚಿವರು: ಕಲಬುರಗಿ, ಯಾದಗಿರಿ, ಬೀದರ್ ಜಿಲ್ಲೆಗಳಲ್ಲಿ ಶೇ. 85 ರಷ್ಟು ಪುಸ್ತಕಗಳು ವಿತರಣೆ ಆಗಿವೆ. ಪಠ್ಯಪುಸ್ತಕ ಮುದ್ರಣಕ್ಕೆ ಹಿಂದಿನ ಬಾರಿಗಿಂತ ಹೆಚ್ಚು ಖರ್ಚಾಗಿದೆಯೇ? ಎಂಬ ಪತ್ರಕರ್ತರ ಪ್ರಶ್ನೆಗೆ, ಎಷ್ಟು ಖರ್ಚಾಗಿದೆ ಅನ್ನೋದರ ಬಗ್ಗೆ ನನಗೆ ಗೊತ್ತಿಲ್ಲ ಎಂದರು. ಇದಕ್ಕೆ ಮರು ಪ್ರಶ್ನೆ ಮಾಡಿದ ಪತ್ರಕರ್ತರು ನಿಮ್ಮ ಇಲಾಖೆ ಬಗ್ಗೆ ನಿಮಗೆ ಗೊತ್ತಿಲ್ಲದಿದ್ರೆ ಹೇಗೆ ಸರ್? ಎಂದಿದಕ್ಕೆ ತಾಳ್ಮೆ ಕಳೆದುಕೊಂಡರು.
ಏನ್ರಿ ಎಲ್ಲಾ ಇಲಾಖೆ ಅಂದಮೇಲೆ ಎಲ್ಲಾನೂ ಗೊತ್ತಿರಬೇಕು ಅಂತಾ ಇದೆಯಾ?. ನನಗೆ ಗೊತ್ತಿಲ್ಲ ರೀ ಅಂತಾ ಹೇಳಿ ಮಾಧ್ಯಮಗೋಷ್ಟಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಫ್ಲೈಟ್ ಟೈಮ್ ಆಗ್ತಿದೆ ಅಂತಾ ಹೇಳಿ ಹೊರನಡೆದರು.
ಓದಿ: ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ಭಾರಿ ಮಳೆ ಆರ್ಭಟ: ಕಾಫಿನಾಡಿನಲ್ಲಿ ಶಾಲೆಗಳಿಗೆ ರಜೆ