ಕಲಬುರಗಿ: ನಾಪತ್ತೆಯಾದ ವ್ಯಕ್ತಿಯೊಬ್ಬರು 12 ವರ್ಷಗಳ ತರುವಾಯ ಮನೆಗೆ ಮರಳಿರುವ ಘಟನೆ ಜಿಲ್ಲೆಯ ಲಾಡ ಚಿಂಚೋಳಿ ಗ್ರಾಮದಲ್ಲಿ ನಡೆದಿದೆ. ಈ ವ್ಯಕ್ತಿಯ ಹೆಸರು ಚಂದ್ರಕಾಂತ ಹರವಾಳ (45). ಇವರಿಗೆ ಮನೆ ಬಿಟ್ಟು ಹೋಗುವಾಗ 33 ವರ್ಷದ ವಯಸ್ಸಾಗಿತ್ತಂತೆ. ಹೆಂಡತಿ ಗುರುಬಾಯಿ ಜೊತೆ ಸಂಸಾರ ನಡೆಸುತ್ತಿದ್ದ ಚಂದ್ರಕಾಂತ, ತಮ್ಮ ಜಮೀನಿನಲ್ಲಿ ಕೃಷಿ ಕಾಯಕ ಮಾಡುತ್ತಿದ್ದರು. ಆದರೆ ಅದೊಂದು ದಿನ ಮನೆಯಿಂದ ಹೊರ ಹೋದವರು ಮತ್ತೆ ಮನೆಗೆ ಬರಲಿಲ್ಲ.
ಈಗ ಬರಬಹುದು ಆಗ ಬರಬಹುದೆಂದು ದಾರಿ ನೋಡುತ್ತಿದ್ದ ಕುಟುಂಬಸ್ಥರು ನಿರಾಶೆ ವ್ಯಕ್ತಪಡಿಸುತ್ತಿದ್ದರು. ಸಂಬಂಧಿಕರು, ಸ್ನೇಹಿತರನ್ನು ವಿಚಾರಿಸಿದರೂ ಸುಳಿವು ಸಿಕ್ಕಿರಲಿಲ್ಲ. ಇಡೀ ಕುಟುಂಬ ನೋಡಿಕೊಳ್ಳುತ್ತಿದ್ದ ಮನೆಮಗ ಕಾಣೆಯಾಗಿದ್ದರಿಂದ ಕುಟುಂಬ ಸದಸ್ಯರು ಕಂಗಾಲಾಗಿದ್ದರು.
ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಕಂಡ ಕಂಡ ದೇವರಿಗೆ ಕೈ ಮುಗಿದು ಹರಕೆ ಹೊತ್ತರೂ ವ್ಯಕ್ತಿ ಎಲ್ಲಿದ್ದಾನೆ?, ಕನಿಷ್ಠ ಪಕ್ಷ ಜೀವಂತವಾಗಿದ್ದಾನಾ? ಎಂಬ ಬಗ್ಗೆಯೂ ಸಣ್ಣ ಸುಳಿವೂ ಸಿಕ್ಕಿರಲಿಲ್ಲ. ಕುಟುಂಬಸ್ಥರು ನಾಲ್ಕಾರು ವರ್ಷ ಹುಡುಕಿ ಕಡೆಗೆ ಸೋತು ಕೈಚೆಲ್ಲಿದ್ದರು. ಆದರೆ ವಾರದ ಹಿಂದೆ ನಿಮ್ಮ ಪತಿ ನಮ್ಮ ಬಳಿ ಇದ್ದಾರೆ ಎಂಬ ಮೊಬೈಲ್ ಕರೆ ಬಂದಾಗ ಚಂದ್ರಕಾಂತ ಅವರ ಪತ್ನಿ ಹಾಗೂ ಕುಟುಂಬ ಸದಸ್ಯರ ಸಂತೋಷಕ್ಕೆ ಪಾರವೇ ಇರಲಿಲ್ಲ.
ಚಂದ್ರಕಾಂತ ಕೇರಳ ರಾಜ್ಯದ ಕೊಲ್ಲಂನ ಪಠನಪುರಂ ಗಾಂಧಿ ಭವನ ಸ್ವಯಂ ಸೇವಾ ಸಂಸ್ಥೆಯೊಂದರಲ್ಲಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು. ಹಲವು ವರ್ಷಗಳ ಹಿಂದೆ ಕಾಣೆಯಾದ ಈತ ಅದ್ಹೇಗೋ ಕೊಲ್ಲಂಗೆ ತೆರಳಿ ಅಲ್ಲಿನ ರಸ್ತೆಯೊಂದರಲ್ಲಿ ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿ ಓಡಾಡುತ್ತಿದ್ದಾಗ ಅಲ್ಲಿನ ಪೊಲೀಸರು ನಿರಾಶ್ರಿತರ ಕೇಂದ್ರಕ್ಕೆ ದಾಖಲಿಸಿದ್ದರಂತೆ. ಹಲವು ವರ್ಷಗಳ ಕಾಲ ಚಿಕಿತ್ಸೆ ಪಡೆದಿದ್ದ ಚಂದ್ರಕಾಂತ ಚೇತರಿಸಿಕೊಂಡಿದ್ದರು.
ನಿರಾಶ್ರಿತ ಕೇಂದ್ರದಲ್ಲಿ ವಾಸವಿದ್ದ ಇವರನ್ನು ಗಾಂಧಿ ಭವನ ಸ್ವಯಂ ಸೇವಾ ಸಂಸ್ಥೆಯ ಸಿಬ್ಬಂದಿ ಕೌನ್ಸಿಲಿಂಗ್ ನಡೆಸಿ ಅವರ ವಿಳಾಸ ಪತ್ತೆ ಹಚ್ಚಿದ್ದಾರೆ. ಈ ಮೂಲಕ ಕಲಬುರಗಿಯ ಲಾಡದ ಚಿಂಚೋಳಿ ಗ್ರಾಮದಿಂದ 12 ವರ್ಷಗಳ ಹಿಂದೆ ಕಾಣೆಯಾಗಿದ್ದ ಚಂದ್ರಕಾಂತರನ್ನು ಮರಳಿ ಕುಟುಂಬಕ್ಕೆ ಸೇರಿಸುವಲ್ಲಿ ಸಫಲರಾಗಿದ್ದಾರೆ. ಕೇರಳದಿಂದ ಕರೆತಂದ ತಂಡ ನರೋಣಾ ಪೊಲೀಸರ ಸಮ್ಮುಖದಲ್ಲಿ ಪತ್ನಿ ಗುರುಬಾಯಿ ಅವರಿಗೆ ಚಂದ್ರಕಾಂತರನ್ನು ಒಪ್ಪಿಸಿದ್ದಾರೆ.
ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಪ್ರಯತ್ನ.. ಕಾಲು ಜಾರಿ ಬಿದ್ದ ಪ್ರಯಾಣಿಕ.. ಪ್ರಾಣ ಉಳಿಸಿದ ಪೊಲೀಸ್