ಕಲಬುರಗಿ: ಎಲ್ಲರಿಗೂ ಆಗಾಗ ವನವಾಸ ಬರುತ್ತೆ. ಕೆಲವು ದಿನ ಈ ವನವಾಸವನ್ನು ಅನುಭವಿಸಬೇಕಾಗುತ್ತದೆ. ಈಗ ಕಾಂಗ್ರೆಸ್ ಪಕ್ಷಕ್ಕೂ ಸಹ ವನವಾಸ ಸಮಯ ಬಂದಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ತಮ್ಮ ಸೋಲಿನ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ.
ನಮ್ಮ ಈಟಿವಿ ಭಾರತ ಪ್ರತಿನಿಧಿಯೊಂದಿಗೆ ಮಾತನಾಡಿರುವ ಖರ್ಗೆ, ತಳಮಟ್ಟದಿಂದ ಪಕ್ಷ ಕಟ್ಟಿ ಮತ್ತೇ ಮುಂದೆ ಒಂದು ದಿನ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಸೋತಿದೆ, ಹಾಗಂತ ನಿರಾಸೆಯಾಗಿ ನಿಲ್ಲುವ ಪ್ರಶ್ನೆಯೇ ಇಲ್ಲ. ಪಕ್ಷದ ನೀತಿ ಸಿದ್ಧಾಂತದನ್ವಯ ಮುಂದೆ ಸಾಗುತ್ತೇವೆ, ಅಲ್ಲದೆ, ರಾಷ್ಟ್ರಮಟ್ಟದಲ್ಲಿ ನಾಳೆ ಸಭೆ ನಡೆಸಿ ಕಾರ್ಯಕರ್ತರಿಗೆ ವಿಶೇಷವಾದ ಸಂದೇಶವೊಂದನ್ನು ರವಾನಿಸುತ್ತೇವೆ. ಸೋಲಿಗೆ ಕಾರಣ ಏನೆಂದು ಪರಾಮರ್ಶೆ ಸಹ ನಡೆಸುತ್ತೇವೆ ಹಿರಿಯ ನಾಯಕ ತಿಳಿಸಿದ್ದಾರೆ.
ಇನ್ನು ಕಾಂಗ್ರೆಸ್ ಸೋಲಿಗೆ ರಾಹುಲ್ ಗಾಂಧಿ, ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಕಾರಣವೇ ಎಂಬ ಪ್ರಶ್ನೆಗೆ ಉತ್ತರಿಸಿದ ಖರ್ಗೆ, ಸೋಲಿಗೆ ಯಾರನ್ನೂ ಹೊಣೆ ಮಾಡುವುದು ಸರಿಯಲ್ಲ. ರಾಹುಲ್ ಗಾಂಧಿ ತಮ್ಮ ಹಾಗೂ ಪಕ್ಷದ ನಿಲುವನ್ನು ಜನರಿಗೆ ತಿಳಿಸಿದ್ದರು. ಆದರೆ, ಜನರು ಇದನ್ನು ಒಪ್ಪಲಿಲ್ಲ. ನಮಗೆ ಆಶೀರ್ವಾದವನ್ನು ಸಹ ಮಾಡಲಿಲ್ಲ. ಜನರ ಆದೇಶಕ್ಕೆ ತಲೆಬಾಗುತ್ತೇವೆ. ಆದ್ರೆ ಸೋತ ಮೇಲೆ ಒಬ್ಬರ ಮೇಲೊಬ್ಬರು ಗೂಬೆ ಕೂರಿಸುವುದು ಸರಿಯಲ್ಲ. ಮೋದಿ ತಮ್ಮ ಐದು ವರ್ಷ ಸಾಧನೆ ಬಗ್ಗೆ ಹೇಳಿ ಮತ ಪಡೆದಿಲ್ಲ, ಬದಲಾಗಿ ಭಾವನಾತ್ಮಕ ವಿಚಾರಗಳಿಂದ ಮತಗಳನ್ನು ಸೆಳೆದಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ.