ಕಲಬುರಗಿ: ಜಿಲ್ಲೆಯ ಜನರು ಇನ್ನೂ ಕೂಡ ಕೊರೊನಾ ಗಂಭೀರತೆಯನ್ನ ಅರಿತಿಲ್ಲ. ಸಾಕಷ್ಟು ಜನರು ಅನಾಗರಿಕರಂತೆ ವರ್ತಿಸುತ್ತಿದ್ದು, ಅನಿವಾರ್ಯವಾಗಿ ನಾಳೆಯಿಂದ ಲಾಕ್ಡೌನ್ ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರುವುದಾಗಿ ಡಿಸಿ ಬಿ.ಶರತ್ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಆರಂಭದಲ್ಲಿಯೇ ಜಿಲ್ಲೆಯ ಜನರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ನಾನು ತುಂಬಾ ನೋವಿನಿಂದ ಹೇಳುತ್ತಿದ್ದೇನೆ. ಜಿಲ್ಲೆಯ ಜನ ಕೊರೊನಾ ಗಂಭೀರತೆಯನ್ನ ಇನ್ನೂ ಅರಿತಿಲ್ಲ. ಈಗಾಗಲೇ ಮಾರಣಾಂತಿಕ ವೈರಸ್ ಮೂರನೇ ಹಂತದ ಸಮೀಪದಲ್ಲಿದೆ. ಒಂದು ವೇಳೆ ಮೂರನೇ ಹಂತ ತಲುಪಿದ್ರೆ ದೊಡ್ಡ ಬೆಲೆ ತೆರಬೇಕಾಗುತ್ತೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಜನರ ವರ್ತನೆಯಿಂದ ಜಿಲ್ಲೆಯಲ್ಲಿ ಮತ್ತಷ್ಟು ಕಠಿಣ ಕ್ರಮಗಳನ್ನ ಕೈಗೊಳ್ಳುವ ಅನಿವಾರ್ಯತೆ ಎದುರಾಗಿದೆ. ಅನಗತ್ಯವಾಗಿ ರಸ್ತೆಗಿಳಿಯುವ ವಾಹನ ಸವಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ವಾಹನಗಳನ್ನ ಸೀಜ್ ಮಾಡಲಾಗುವುದು. ಈ ಎಲ್ಲವುಗಳಿಂದ ಮುಕ್ತಿ ಹೊಂದಬೇಕೆಂದರೆ ಜನರು ಮನೆಯಲ್ಲಿರುವುದೊಂದೇ ಪರಿಹಾರ. ಹಾಗಾಗಿ ಸಾರ್ವಜನಿಕರು ಮನೆ ಬಿಟ್ಟು ಹೊರ ಬಾರದೆ ಸಹಕರಿಸಿ ಎಂದು ಜಿಲ್ಲಾಧಿಕಾರಿ ಬಿ.ಶರತ್ ಮನವಿ ಮಾಡಿದ್ದಾರೆ.