ಕಲಬುರಗಿ: ಜೈಲಿನಿಂದ ಹೊರಬಂದು ಮತ್ತೆ ಮನೆಗಳ್ಳತನದಲ್ಲಿ ಸಕ್ರಿಯವಾಗಿದ್ದ ಖತರ್ನಾಕ್ ಅಂತರ್ ಜಿಲ್ಲಾ ಮನೆಗಳ್ಳನನ್ನು ಬಂಧಿಸಿ ಪೊಲೀಸರು ಮತ್ತೆ ಜೈಲಿಗೆ ಅಟ್ಟಿದ್ದಾರೆ.
ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹೊನಳ್ಳಿ ಗ್ರಾಮದ ಸಂತೋಷ ನಂದಿಹಾಳ ಬಂಧಿತ ಆರೋಪಿ. ಈ ಮುಂಚೆ ಮನೆಗಳ್ಳತನ ಪ್ರಕರಣದಲ್ಲಿ ಸಿಕ್ಕಿಬಿದ್ದು ಜೈಲುವಾಸ ಅನುಭವಿಸಿದ ಸಂತೋಷ, ಜೈಲಿನಿಂದ ಹೊರಬಂದು ಮತ್ತೆ ಮನೆ ಕಳ್ಳತನದಲ್ಲಿ ಸಕ್ರಿಯನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆಳಂದ ತಾಲೂಕಿನ ನಿಂಬರ್ಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 3, ಮಾದನಹಿಪ್ಪರಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 3 ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಹೆಚ್ಚುವರಿ ಎಸ್ಪಿ ಅವರ ಮಾರ್ಗದರ್ಶನಲ್ಲಿ ಆಳಂದ ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ನೇತೃತ್ವದಲ್ಲಿ ಸಿಪಿಐ ಮಂಜುನಾಥ್ ಎಸ್, ನಿಂಬರ್ಗಾ ಪಿಎಸ್ಐ ಸಂತೋಷಕುಮಾರ ಚವ್ಹಾಣ ಹಾಗೂ ಸಿಬ್ಬಂದಿ ದಾಳಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನಿಂದ 7.96 ಲಕ್ಷ ರೂಪಾಯಿ ಮೌಲ್ಯದ 157 ಗ್ರಾಂ ಚಿನ್ನಾಭರಣ, 230 ಗ್ರಾಂ ಬೆಳ್ಳಿ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.