ಕಲಬುರಗಿ:ಕೊರೊನಾ ಹರಡುವಿಕೆ ತಡೆಯಲು ಕಲಬುರಗಿ ಜಿಲ್ಲೆಯನ್ನೂ ಲಾಕ್ಡೌನ್ ಮಾಡಲಾಗಿದೆ. ಜಿಲ್ಲೆಯಲ್ಲಿ 144 ಸೆಕ್ಷೆನ್ ಜಾರಿ ಕೂಡಾ ಮಾಡಲಾಗಿದೆ. ಆದ್ರೆ ಜನ ಮಾತ್ರ ಗಂಭೀರವಾಗಿ ಪರಿಗಣಿಸುತ್ತಿಲ್ಲ.
ಜನತಾ ಕಫ್ಯೂಗೆ ಬಾರಿ ಬೆಂಬಲ ನೀಡಿ ಮನೆಯಿಂದ ಹೊರಬಾರದಂತೆ ಸ್ವಯಂ ನಿರ್ಬಂಧ ಹೇರಿಕೊಂಡಿದ್ದ ಕಲಬುರಗಿ ಜನತೆ ಇಂದು ಮತ್ತೆ ಮನೆಯಿಂದ ಹೊರಗೆ ಓಡಾಡಲು ಆರಂಭಿಸಿದ್ದಾರೆ. ಜಿಲ್ಲೆಯಾದ್ಯಂತ ಅಗತ್ಯ ದಿನಬಳಕೆ ವಸ್ತು ಹೊರತುಪಡಿಸಿ ಎಲ್ಲಾ ವ್ಯಾಪಾರ ವಹಿವಾಟಿಗೆ ಬ್ರೇಕ್ ಹಾಕಲಾಗಿದೆ. ಎನ್‌ಇಕೆಎಸ್‌ಆರ್‌ಟಿಸಿ ಬಸ್ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಆದ್ರೆ ಆಟೋ ಸಂಚಾರ, ಖಾಸಗಿ ವಾಹನಗಳ ಸಂಚಾರ ದಟ್ಟಣೆ ಕಂಡುಬರುತ್ತಿದೆ. ಗುಂಪು ಗುಂಪಾಗಿ ನಿಲ್ಲುವುದು ಓಡಾಡುವ ದೃಶ್ಯ ಕಂಡುಬರುತ್ತಿದೆ. 144 ಸೆಕ್ಷನ್ ಜಾರಿಗೂ ಕಲಬುರಗಿ ಜನತೆ ಕ್ಯಾರೇ ಎನ್ನದಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.
ಗಗನಕ್ಕೇರಿದ ತರಕಾರಿ ಬೆಲೆ:
ಕೊರೊನಾ ವೈರಸ್ ಭೀತಿಯನ್ನೇ ಬಂಡವಾಳ ಮಾಡಿಕೊಂಡ ಕೇಲ ಮಧ್ಯವರ್ತಿಗಳು, ಕೃತಕ ಅಭಾವ ಸೃಷ್ಟಿಸಿ ತರಕಾರಿ ಬೆಲೆ ಏರಿಕೆಯಾಗುವಂತೆ ಮಾಡುತ್ತಿದ್ದಾರೆ. ನಗರದ ಮಾರ್ಕೆಟ್, ಸೂಪರ್ ಮಾರ್ಕೆಟ್ ನ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಲು ಬರುವ ಗ್ರಾಹಕರ ಜೇಬಿಗೆ ಕತ್ತರಿ ಬಿಳುತ್ತಿದೆ. ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ತರಕಾರಿ ಸಿಗುತ್ತಿಲ್ಲ ಎಂದು ಅಭಾವ ಸೃಷ್ಟಿಸಿ ನಿತ್ಯದ ಬೆಲೆಗಿಂತ ಮೂರರಿಂದ ನಾಲ್ಕುಪಟ್ಟು ತರಕಾರಿ ಬೆಲೆ ಏರಿಕೆ ಮಾಡಿ ಮಾರಾಟ ಮಾಡಲಾಗುತ್ತಿದೆ. ಸಾಮಾನ್ಯ ದಿನಗಳಲ್ಲಿ 10 ರೂ.ಕೆಜಿ ಮಾರಾಟವಾಗುತ್ತಿದ್ದ ಟೊಮ್ಯಾಟೋ ಇದೀಗ ಕೆಜಿಗೆ ,40 ರೂ. ಆಗಿದೆ. 50 ರೂ. ಕೆಜಿ ಇದ್ದ ಹಸಿ ಮೆಣಸಿನಕಾಯಿ 120 ರೂ, 40 ರೂ ಇದ್ದ ಬೆಂಡೆಕಾಯಿ 80 ರೂಪಾಯಿ ಹೀಗೆ ಪ್ರತಿಯೊಂದು ತರಕಾರಿ ಬೆಲೆ ಏರಿಕೆಯಾಗಿದೆ.