ಕಲಬುರಗಿ: ಕಲಬುರಗಿಯ ಕೇಂದ್ರ ಕಾರಾಗೃಹದಲ್ಲಿ ದುಡ್ಡು ಕೊಟ್ಟರೆ ಸಾಕು ಗಾಂಜಾ ಸೇರಿದಂತೆ ಎಲ್ಲವು ಸಿಗುತ್ತದೆ ಎಂದು ವಕೀಲ ಹಣಮಂತ ಯಳಸಂಗಿ ಗಂಭೀರವಾಗಿ ಆರೋಪಿಸಿದ್ದಾರೆ.
ಕೇಂದ್ರ ಕಾರಾಗೃಹದಲ್ಲಿ ಶ್ರೀಮಂತ ಅಪರಾಧಿಗಳಿಗೊಂದು ನಿಯಮ, ಬಡ ಕೈದಿಗಳಿಗೊಂದು ನಿಯಮ ಎಂಬಂತಾಗಿದೆ. ದುಡ್ಡು ಕೊಟ್ಟರೆ ಗಾಂಜಾ ಸೇರಿದಂತೆ ಎಲ್ಲವು ಸಿಗುತ್ತದೆ. ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳು ಹಣ ನೀಡಿ ಜೈಲಿನಿಂದ ಹೊರಗಡೆ ಹೋಗುತ್ತಿದ್ದಾರೆ.
ಜೈಲಿನ ಒಳಗಿರುವ ಕೈದಿಗಳಿಗೆ ಹೊರಗಡೆಯಿಂದ ಯಾವ ವಸ್ತುಗಳನ್ನು ಕಳುಹಿಸಲು ಅವಕಾಶವಿಲ್ಲ. ಆದರೆ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಕೈದಿಗಳಿಗೆ ನಿತ್ಯ ಚಿಕನ್, ಮಟನ್ ಸೇರಿದಂತೆ ಬೇಕಾದ ಎಲ್ಲಾ ವಸ್ತುಗಳು ದೊರೆಯುತ್ತಿವೆ. ಜೈಲಿನಲ್ಲಿ ರಾಜಾರೋಷವಾಗಿ ಗಾಂಜಾ ಕೂಡ ಮಾರಾಟ ಮಾಡಲಾಗುತ್ತಿದೆ. ತಂಪು ಪಾನೀಯ ಬಾಟಲಿಯಲ್ಲಿ ರಮ್, ಬಿಸಲೇರಿ ಬಾಟಲಿಯಲ್ಲಿ ಜಿನ್ ಸಪ್ಲೆಯಾಗುತ್ತೆ. ಇದಕ್ಕೆ ಕಾರಾಗೃಹ ಸಿಬ್ಬಂದಿಯ ಸಹಕಾರವಿದೆ ಎಂದು ಆರೋಪಿಸಿದ್ದಾರೆ.
ಒಟ್ಟಿನಲ್ಲಿ ಇಷ್ಟೆಲ್ಲಾ ಅಕ್ರಮ ನಡೆಯುತ್ತಿದ್ದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಸುಮ್ಮನೆ ಕುಳಿತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.