ಕಲಬುರಗಿ: ಜಿಮ್ಸ್ ಆಸ್ಪತ್ರೆ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ನಿರ್ಲಕ್ಷ್ಯ ಪರಿಣಾಮ ನಾಲ್ಕು ಗಂಟೆಗಳ ಕಾಲ ಯುವಕನೊಬ್ಬ ಆಸ್ಪತ್ರೆ ಮುಂದೆ ಬಿದ್ದು ನರಳಾಡಿರುವ ಘಟನೆ ಬೆಳಕಿಗೆ ಬಂದಿದೆ.
ಆಳಂದ ತಾಲೂಕಿನ ಸಂಗೋಳಗಿ (ಸಿ) ಗ್ರಾಮದ ಸತೀಶ್ ಮಾಲಿಬಿರಾದಾರ (25) ಎಂಬಾತ ನಾಲ್ಕು ದಿನಗಳಿಂದ ಶೀತ - ಜ್ವರದಿಂದ ಬಳಲುತ್ತಿದ್ದು, ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ದರೆ ಕೋವಿಡ್ ಜ್ವರ ಇರಬಹುದು ಎಂದು ದಾಖಲಿಸಿಕೊಳ್ಳಲು ನಿರಾಕರಿಸಿವೆ.
ಜಿಮ್ಸ್ ಆಸ್ಪತ್ರೆಗೆ ಕರೆತಂದರೆ ಕೋವಿಡ್ ವರದಿ ನಾಲ್ಕೈದು ಗಂಟೆಯಲ್ಲಿ ಬರಲಿದೆ. ಅಲ್ಲಿವರೆಗೆ ಕಾಯಬೇಕು ಎಂದು ಹೇಳಿ ಜಾರಿಕೊಂಡಿದ್ದಾರಂತೆ. ಹೀಗಾಗಿ ಆಸ್ಪತ್ರೆಯ ಆವರಣದಲ್ಲಿಯೇ ನಾಲ್ಕು ಗಂಟೆಗಳ ಕಾಲ ಯುವಕ ನರಳಾಡಿದ್ದಾನೆ.
ಚಿಕಿತ್ಸೆ ನೀಡಿ ಎಂದು ಆತನ ಸಂಬಂಧಿಕರು ಅಂಗಲಾಚಿದರೂ ಚಿಕಿತ್ಸೆ ನೀಡದೇ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಅಮಾನವಿಯವಾಗಿ ವರ್ತಿಸಿದ್ದಾರೆ. ಕೋವಿಡ್ ಟೆಸ್ಟ್ ವರದಿ ಬಂದ ನಂತರ ರಿಪೋರ್ಟ್ ನೆಗೆಟಿವ್ ಇದೆ ಎಂದಾದರೆ ಖಾಸಗಿ ಆಸ್ಪತ್ರೆಗೆ ಹೋಗಿ ದಾಖಲಾಗಿ ಎಂದು ಹೇಳಿದ್ದಾರೆಂದು ಯುವಕನ ಪೋಷಕರು ಆರೋಪಿಸಿದ್ದಾರೆ.
ವೈದ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ನಾಲ್ಕು ಗಂಟೆ ಜಿಮ್ಸ್ ಆಸ್ಪತ್ರೆ ಆವರಣದಲ್ಲಿ ನರಳಾಡಿದ ಯುವಕನಿಗೆ ಕನಿಷ್ಠ ಪಕ್ಷ ಪ್ರಾಥಮಿಕ ಚಿಕಿತ್ಸೆ ಕೂಡಾ ನೀಡದೇ ಅಮಾನವಿಯ ವರ್ತನೆ ಮಾಡಿದ ಜಿಮ್ಸ್ ಆಸ್ಪತ್ರೆ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ನ್ಯಾಯವಾದಿ ಭೀಮಾಶಂಕರ್ ಮಾಡಿಯಾಳ ಆಗ್ರಹಿಸಿದ್ದಾರೆ.