ಕಲಬುರಗಿ: ಪತಿಯೇ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಿಂಚೋಳಿ ತಾಲೂಕಿನ ಅಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಕಾಶಮ್ಮ ಈಳಿಗೇರ ಕೊಲೆಯಾದ ಮಹಿಳೆ. ಮಾರುತಿ ಈಳಿಗೇರ ಕೊಲೆ ಮಾಡಿದ ಆರೋಪಿ. ರಟಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.
3 ವರ್ಷದ ಹಿಂದೆ ಜೈಲಿನಿಂದ ಪರಾರಿಯಾಗಿದ್ದ ಕೈದಿ ಬಂಧನ: ಕಲಬುರಗಿಯ ಕೇಂದ್ರ ಕಾರಾಗೃಹದಿಂದ ಮೂರು ವರ್ಷಗಳ ಹಿಂದೆ ತಪ್ಪಿಸಿಕೊಂಡಿದ್ದ ಕೈದಿಯನ್ನು ಫರತಾಬಾದ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಚಿಂಚೋಳಿ ತಾಲೂಕಿನ ಗಡಿಲಿಂಗದಳ್ಳಿ ಗ್ರಾಮದ ನಿವಾಸಿ ರಮೇಶ್ ಅಲಿಯಾಸ್ ರಾಮ್ಯಾ ವಡ್ಡರ್ ಬಂಧಿತ ಕೈದಿ. ಕೈದಿಯನ್ನು 2021ರ ಜನವರಿಯಲ್ಲಿ ಜೈಲಿನ ಹೊರವಲಯದಲ್ಲಿರುವ ಜಮೀನಿನಲ್ಲಿ ತೊಗರಿ ರಾಶಿ ಮಾಡುವ ಕೆಲಸಕ್ಕೆ ಕರೆದುಕೊಂಡು ಹೋದ ವೇಳೆ ಬಹಿರ್ದೆಸೆಗೆ ಹೋಗಿ ಬರುವುದಾಗಿ ಹೇಳಿ ಪರಾರಿಯಾಗಿದ್ದ. ಈ ಸಂಬಂಧ ಫರತಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಬಂಧಿತ ಕೈದಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ: ಮಗ ಮಾಡಿದ್ದ 700 ರೂಪಾಯಿ ಸಾಲಕ್ಕೆ ತಂದೆ ಕೊಲೆ: ಅಪರಾಧಿಗಳಿಗೆ 9 ವರ್ಷ ಜೈಲು ಸಜೆ
ಚಾಕುವಿನಿಂದ ಇರಿದು ಪತ್ನಿ ಕೊಲೆ ಮಾಡಿದ ಪತಿ(ಹಾವೇರಿ): ಇತ್ತೀಚಿಗೆ, ಚಾಕುವಿನಿಂದ ಇರಿದು ಪತಿಯೇ ತನ್ನ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಹೂಲಿಹಳ್ಳಿ ಗ್ರಾಮದಲ್ಲಿ ನಡೆದಿತ್ತು. ಪವಿತ್ರಾ ಹಳ್ಳೇರ (22) ಕೊಲೆಯಾದ ಮಹಿಳೆ. ರೇವಣ್ಣೆಪ್ಪ ಹಳ್ಳೇರ ಕೊಲೆಗೈದ ಆರೋಪಿ ಪತಿ. ಕ್ಷುಲ್ಲಕ ಕಾರಣಕ್ಕಾಗಿ ಗಂಡ, ಹೆಂಡತಿ ಶುಕ್ರವಾರ ಸಂಜೆ ಜಗಳವಾಡಿದ್ದರು. ಈ ವೇಳೆ ಚಾಕುವಿನಿಂದ ಇರಿಯಲಾಗಿದ್ದು, ತೀವ್ರವಾಗಿ ಗಾಯಗೊಂಡಿದ್ದ ಪವಿತ್ರಾ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದರು. ಸ್ಥಳಕ್ಕೆ ರಾಣೇಬೆನ್ನೂರು ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು.
ಅಣ್ಣನಿಂದ ತಮ್ಮನ ಹತ್ಯೆ(ಹುಬ್ಬಳ್ಳಿ): ಒಡಹುಟ್ಟಿದ ಅಣ್ಣನೇ ತಮ್ಮನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹುಬ್ಬಳ್ಳಿಯ ವಿಜಯನಗರದಲ್ಲಿ ಇತ್ತೀಚಿಗೆ ನಡೆದಿತ್ತು. ಮೃತ ವ್ಯಕ್ತಿಯನ್ನು ಪವನ್ ಕಟವಾಟೆ (30) ಎಂದು ಗುರುತಿಸಲಾಗಿದೆ. ರಾಜು ಕೊಲೆಗೈದ ಆರೋಪಿ. ಪವನ್ ಮನೆ ಬಿಟ್ಟು ಹುಬ್ಬಳ್ಳಿಯ ವಿಜಯನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದ. ಹೀಗಿದ್ದರೂ ಮದ್ಯ ಸೇವಿಸಿ ಅಣ್ಣನ ಜೊತೆ ಜಗಳವಾಡುತ್ತಿದ್ದ. ಡಿಸೆಂಬರ್ 20 ರ ಬುಧವಾರ ಪವನ್ ಅಣ್ಣನ ಮನೆಗೆ ಬಂದು ಕ್ಯಾತೆ ತೆಗೆದಿದ್ದ. ಇದರಿಂದ ಕೋಪಗೊಂಡ ರಾಜು, ಪವನ್ ಮನೆಗೆ ಬಂದು ಮಲಗಿದ್ದಾಗ ಕುತ್ತಿಗೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿ, ಪರಾರಿಯಾಗಿದ್ದ. ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.