ಸೇಡಂ: ತಾಲೂಕಿನಾದ್ಯಂತ ಇಂದು ಭಾರಿ ಮಳೆ ಸುರಿದಿದೆ. ಮಳೆಯಿಂದ ಅನೇಕ ಮನೆಗಳಿಗೆ ನೀರು ನುಗ್ಗಿದೆ. ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ.
ಪಟ್ಟಣದ ಚೋಟಿ ಗಿರಣಿ, ಕೋಡ್ಲಾ ಕ್ರಾಸ್, ಜಿ.ಕೆ. ರಸ್ತೆ, ದೊಡ್ಡ ಅಗಸಿ, ಸಣ್ಣ ಅಗಸಿ ಸೇರಿದಂತೆ ಅನೇಕ ಕಡೆಗಳ ರಸ್ತೆಗಳ ಮೇಲೆ ನೀರು ಜಮಾವಣೆಯಾಗಿದ್ದು, ಸಂಚಾರಕ್ಕೆ ಸಂಚಕಾರ ತಂದೊಡ್ಡಿದೆ. ಕೆಲವೆಡೆ ಮಳೆ ಅವಾಂತರ ಸೃಷ್ಟಿಸಿದ್ದು, ಮನೆಗಳಿಗೆ ನೀರು ನುಗ್ಗಿದೆ. ಮನೆಗಳಲ್ಲಿದ್ದ ದವಸ-ಧಾನ್ಯಗಳು ನೀರು ಪಾಲಾಗಿದ್ದು, ನಿವಾಸಿಗಳು ಅವೈಜ್ಞಾನಿಕ ಚರಂಡಿಗಳ ನಿರ್ಮಾಣದಿಂದಲೇ ಮನೆಗಳಿಗೆ ನೀರು ನುಗ್ಗಿದೆ ಎಂದು ಹಿಡಿಶಾಪ ಹಾಕುತ್ತಿದ್ದಾರೆ.
ಚೋಟಿಗಿರಣಿ ಬಡಾವಣೆಯ ಅನೇಕ ಮನೆಗಳಿಗೆ ಚರಂಡಿ ನೀರು ನುಗ್ಗಿದೆ. ಅಲ್ಲದೆ ಪುರಸಭೆಯವರು ಕೊರೆದ ಬೋರ್ವೆಲ್ ಒಳಕ್ಕೂ ನೀರು ಸೇರಿಕೊಳ್ಳುತ್ತಿದೆ. ತೊಳೆಯಲು ಇಟ್ಟಿದ್ದ ಅಡುಗೆ ಸಾಮಗ್ರಿಗಳು ಚರಂಡಿ ನೀರಲ್ಲಿ ಕೊಚ್ಚಿಕೊಂಡು ಹೋಗುವಾಗ ಹರಸಾಹಸ ಪಟ್ಟು ಹಿಡಿದಿಟ್ಟ ಗೃಹಿಣಿಯ ಮನಕಲಕುವ ದೃಶ್ಯ ಸೆರೆಯಾಗಿದೆ. ತಾಲೂಕಿನ ವಿವಿದೆಢೆಯಲ್ಲಿ ಐದು ಮನೆಗಳು ನೆಲಸಮವಾಗಿವೆ. ಕಾಗಿಣಾ ಮತ್ತು ಕಮಲಾವತಿ ನದಿ ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದ ಜನರು ಎಚ್ಚರಿಕೆಯಿಂದಿರಲು ತಹಸೀಲ್ದಾರ ಬಸವರಾಜ ಬೆಣ್ಣೆಶಿರೂರ ಕೋರಿದ್ದಾರೆ.