ಕಲಬುರಗಿ: ರಾಜ್ಯದಲ್ಲಿ ಕೊರೊನಾ ತಾಂಡವ ಆಡುತ್ತಿದೆ. ಕೊರೊನಾ ವಿಷಯದಲ್ಲಿ ರಾಜಕಾರಣ ಮಾಡಿದರೆ ಪಾಪದ ಕೆಲಸ ಎಂದು ಹೆಸರು ಬಳಸದೆ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅಸಮಾಧಾನ ವ್ಯಕ್ತಪಡಿಸಿದರು.
ಕೋವಿಡ್-19 ಕುರಿತಾಗಿ ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪ್ರಿಯಾಂಕ್ ಖರ್ಗೆ ಕೇಳಿದ ಪ್ರಶ್ನೆ ಪ್ರತಿಧ್ವನಿಸಿತು. ಜಿಲ್ಲಾಸ್ಪತ್ರೆಯಲ್ಲಿ ವೈದ್ಯರಿಗೆ ಪಿಪಿಇ ಕಿಟ್, ಮಾಸ್ಕ್, ಗ್ಲೌಸ್, ಸೇಫ್ಟಿ ಕಿಟ್ ಇಲ್ಲವೆಂದು ಪ್ರಿಯಾಂಕ್ ಖರ್ಗೆ ಖುದ್ದು ನನಗೆ ಫೋನ್ ಮಾಡಿ ವಿಚಾರಿಸಿದ್ದಾರೆ. ಏನಾದ್ರು ಕೊರತೆ ಇದೆಯಾ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಕಾರಜೋಳ ಪ್ರಶ್ನೆ ಮಾಡಿದರು. ಯಾವುದೇ ರೀತಿಯ ಕೊರತೆ ಇಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಹಾಗಾದರೆ ಪ್ರಿಯಾಂಕ್ ಖರ್ಗೆ ಅವರಿಗೆ ಕೊರತೆ ಇದೆ ಎಂದು ಹೇಳಿದ್ದು ಯಾರು? ಇದು ರಾಜಕಾರಣ ಮಾಡುವ ಸಮಯವಲ್ಲ. ಇದರಲ್ಲಿ ರಾಜಕಾರಣ ಮಾಡಿದರೆ ಪಾಪದ ಕೆಲಸ ಮಾಡಿದಂತಾಗುತ್ತದೆ. ಖರ್ಗೆ ಅವರಿಗೆ ಸುಳ್ಳು ಮಾಹಿತಿ ಯಾರು ಕೊಟ್ಟಿದ್ದೆಂದು ಅಧಿಕಾರಿಗಳ ಮೇಲೆ ಗರಂ ಆದರು.
ನಿಮ್ಮಿಂದ ಕೆಲಸ ಆಗಲ್ಲ ಅಂದ್ರೆ ರಜೆ ತೆಗೆದುಕೊಳ್ಳಿ:
ಆಳಂದ ಪಟ್ಟಣದಲ್ಲಿ ಮಹಾರಾಷ್ಟ್ರದಿಂದ ಬಂದವರು ಕಳ್ಳಭಟ್ಟಿ ಸಾರಾಯಿ ಕುಡಿದು ಮಜಾ ಮಾಡುತ್ತಿದ್ದಾರೆ. ಅವರ ಬಗ್ಗೆ ಗಮನ ಹರಿಸಬೇಕೆಂದು ಆಳಂದ ಶಾಸಕ ಸುಭಾಷ್ ಗುತ್ತೇದಾರ್ ಸಭೆಯಲ್ಲಿ ಡಿಸಿಎಂಗೆ ಮನವಿ ಮಾಡಿದರು.
ಈ ವೇಳೆ ಅಬಕಾರಿ ಆಯುಕ್ತ ಚಲವಾದಿ ಪ್ರತಿಕ್ರಿಯಿಸಿ, 30 ಕಡೆಗಳಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿಕೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು. ಈ ವೇಳೆ ಧ್ವನಿಗೂಡಿಸಿದ ಎಂಎಲ್ಸಿ ತಿಪ್ಪಣಪ್ಪ ಕಮಕನೂರ, ಅಬಕಾರಿ ಆಯುಕ್ತರು ತುಂಬಾ ಒಳ್ಳೆಯವರು. ರೇಡ್ ಮಾಡುವ ಮುನ್ನ ಕಳ್ಳರಿಗೆ ಮಾಹಿತಿ ನೀಡಿ ರೇಡ್ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.
ಇದರಿಂದ ಗರಂ ಆದ ಸಚಿವರು, ಇವರ ಬಗ್ಗೆ ಅಸಂಬ್ಲಿಯಲ್ಲಿಯೂ ಚರ್ಚೆ ಆಗಿದೆ. ನಿಮ್ಮಿಂದ ಕೆಲಸ ಮಾಡೋದು ಆಗಲ್ಲ ಅಂದ್ರೆ ರಜೆ ತೆಗೆದುಕೊಂಡು ಮನೆಗೆ ಹೋಗಿ ಎಂದರು ಗುಡುಗಿದರು.