ಕಲಬುರಗಿ: ಪ್ರಸ್ತುತ ರಾಜ್ಯದಲ್ಲಿರುವ ಸರ್ಕಾರ ಜನರ ಆಶೀರ್ವಾದದಿಂದ ಬಂದ ಸರ್ಕಾರವಲ್ಲ, ಆಪರೇಷನ್ ಕಮಲದ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಸರ್ಕಾರ, ಕ್ರಿಕೆಟ್ ಬೆಟ್ಟಿಂಗ್ ದಂಧೆ, ಡ್ರಗ್ ದಂಧೆ ಮೂಲಕ ಕಲೆಕ್ಷನ್ ಮಾಡಿದ್ದು, ಈಗ ಸರಿಪಡಿಸಿಕೊಳ್ಳಲು ಸರ್ಕಾರಕ್ಕೆ ಆಗ್ತಿಲ್ಲ ಎಂದು ಕಲಬುರಗಿಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಎಗ್ಗಿಲ್ಲದೆ ನಡೆದಿರುವ ಡ್ರಗ್ ದಂಧೆಯ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಿಎಂ, ಎನ್ಇಪಿ(ಹೊಸ ಶಿಕ್ಷಣ ನೀತಿ) ಜಾರಿಗೆ ತರಲು ಸ್ವಾಮೀಜಿಗಳ ನೇತೃತ್ವದಲ್ಲಿ ಸಭೆ ನಡೆಸಿ ಪಠ್ಯ ಪುಸ್ತಕದಲ್ಲಿ ಏನಿರಬೇಕು ಎಂಬ ಚರ್ಚೆ ಮಾಡುತ್ತಿರುವ ಸರ್ಕಾರ, ಮೊದಲು ಶಾಲೆಗಳ ಮುಂದೆ ನಡೆಯುತ್ತಿರುವ ಡ್ರಗ್ ದಂಧೆ ನಿಲ್ಲಿಸಲು ಕೈಗೊಂಡ ಯೋಜನೆ ಬಗ್ಗೆ ಹೇಳಲಿ ಎಂದು ಕುಮಾರಸ್ವಾಮಿ ಚಾಟಿ ಬೀಸಿದರು.
ಕಳೆದ ಒಂದೂವರೆ ವರ್ಷದ ಹಿಂದೆ ಡ್ರಗ್ ವಿಚಾರ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಚಿತ್ರರಂಗದ ಇಬ್ಬರು ನಟಿಯರು ಸೇರಿ ನಾಲ್ಕಾರು ಜನ ಅರೆಸ್ಟ್ ಆಗಿ ಜೈಲಿಗೆ ಹೊಗಿದ್ದರು. ನಂತರ ಅವರೆಲ್ಲಾ ಏನಾದ್ರೊ, ಅವರ ಬಗ್ಗೆ ಬಿ ರಿಪೋರ್ಟ್ ಹಾಕಿದ್ದಾರೋ, ಸಿ ರಿಪೋರ್ಟ್ ಹಾಕಿದ್ದಾರೋ ಇಲ್ಲಾ ಎ ರಿಪೋರ್ಟ್ ಹಾಕಿದ್ದಾರೋ ಗೊತ್ತಿಲ್ಲ. ಆ ಕೇಸ್ ಮುಚ್ಚಿ ಹೋಯಿತು. ನಾನು ಆವತ್ತೇ ಹೇಳಿದ್ದೆ, ಪ್ರಕರಣದ ತನಿಖೆ ಹಳ್ಳ ಹಿಡಿಸ್ತಾರೆ ಎಂದು, ಇವತ್ತು ಮತ್ತೆ ವಿಷಯದ ಬಗ್ಗೆ ಪುನಃ ಚರ್ಚೆ ನಡೆಯುತ್ತಿದೆ ಎಂದರು.
ಯಾರಿಗೂ ಭಯಭಕ್ತಿ ಇಲ್ಲ.. ಶಾಲಾ ಮಕ್ಕಳಿಗೆ ಎನ್ಇಪಿ ತರಲು ಪರಮಪೂಜ್ಯರ ಜೊತೆ ಸರ್ಕಾರ ಸಭೆ ನಡೆಸಿದೆ. ಪಠ್ಯ ಪುಸ್ತಕದಲ್ಲಿ ಏನು ಇರಬೇಕು, ಏನ್ ಇರಬಾರದು, ನಮ್ಮ ಸಂಸ್ಕೃತಿ ಉಳಿಸೋದಕ್ಕೆ ಯಾವ ವಿಷಯ ಇಡಬೇಕು ಎನ್ನುವುದರ ಬಗ್ಗೆ ಚರ್ಚೆ ಮಾಡಿದ್ದಾರೆ. ಇದನ್ನೆಲ್ಲಾ ಆ ನಂತರ ಮಾಡಲಿ, ಮೊದಲು ಶಾಲಾ ಕಾಲೇಜುಗಳು ಮುಂದೆ ಡ್ರಗ್ ಮಾರಾಟ ಮಾಡೊದನ್ನು ತಡೆಯಲಿ, ಸಣ್ಣ ಮಕ್ಕಳು ಡ್ರಗ್ಸ್ ದಂಧೆಗೆ ಬಲಿಪಶು ಆಗ್ತಿದ್ದಾರೆ. ಅದಕ್ಕೆ ಏನ್ ಕಾರ್ಯಕ್ರಮ ಕೊಟ್ಟಿದ್ದಿರಿ ಅನ್ನೋದರ ಬಗ್ಗೆ ಚಿಂತನೆ ಮಾಡಲಿ ಎಂದು ಸರ್ಕಾರಕ್ಕೆ ಕುಮಾರಸ್ವಾಮಿ ಒತ್ತಾಯಿಸಿದರು. ಅಲ್ಲದೆ, ಡ್ರಗ್ಸ್ ದಂಧೆ ನಡೆಸುವವರು ಪೊಲೀಸ್ ಇಲಾಖೆಯ ಜೊತೆ ಸೇರಿರುತ್ತಾರೆ ಎಂದು ಗಂಭೀರ ಆರೋಪ ಮಾಡಿದರು.
ಪೊಲೀಸರಿಗೆ ದಂಧೆಕೋರರ ಬಗ್ಗೆ ಎಲ್ಲಾ ಮಾಹಿತಿ ಇರುತ್ತದೆ ಆದರೆ ತಿಂಗಳಿಗೆ ಮಾಮೂಲಿ ಹೋಗುತ್ತೆ ಹೀಗಾಗಿ ಅವರು ಏನು ಮಾಡಲು ಸಾಧ್ಯವಿಲ್ಲ, ಸ್ಯಾಂಟ್ರೋ ರವಿಯಂತವರಿಗೆ ಕೋಟಿ ಕೋಟಿ ಹಣ ಕೊಟ್ಟು ವರ್ಗಾವಣೆ ತೊಗೊಂಡು ಬಂದವರು ಎನು ಮಾಡುತ್ತಾರೆ ಹೇಳಿ ಮಾಮೂಲಿ ಪಡೆದು ಸುಮ್ಮನೆ ಇರುತ್ತಾರೆ ಎಂದು ಹೇಳಿದರು.
ಮೆಟ್ರೋ ಪಿಲ್ಲರ್ ಕುಸಿದು ತಾಯಿ ಮಗು ಸಾವು ವಿಚಾರ: ಬೆಂಗಳೂರಿನಲ್ಲಿ ಮೆಟ್ರೋ ಪಿಲ್ಲರ್ ಕುಸಿದು ತಾಯಿ ಮಗು ಸಾವು ಪ್ರಕರಣ ಕುರಿತಾಗಿ ಮಾತನಾಡಿದ ಕುಮಾರಸ್ವಾಮಿ, ಸರ್ಕಾರ ಇದನ್ನ ಲಘುವಾಗಿ ಪರಿಗಣಿಸಬಾರದು, ನಿತ್ಯ ಜನರು ಓಡಾಡುವ ಸ್ಥಳಗಳಲ್ಲಿ ಹೀಗಾಗದರೆ ಅದೇಷ್ಟೊ ಕುಟುಂಬಗಳು ಅನಾಥರಾಗುತ್ತಾರೆ. ಹೀಗಾಗದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸಲು ನಿರ್ವಹಣೆದಾರರಿಗೆ ಸರ್ಕಾರ ಸೂಚನೆ ನೀಡಬೇಕು. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಕೌರವ-ಪಾಂಡವರ ಚರ್ಚೆಗಿಂತ ಮೊದಲು ರಾವಣ ರಾಜ್ಯ ಸರಿಪಡಿಸಬೇಕು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಆರ್‌ಎಸ್‌ಎಸ್‌ನವರು 21ನೇ ಶತಮಾನದ ಕೌರವರು ಎಂದು ಜರಿದಿರುವ ವಿಷಯವಾಗಿ ಮಾತನಾಡಿದ ಕುಮಾರಸ್ವಾಮಿ, ಯಾರು ಕೌರವರು, ಯಾರು ಪಾಂಡವರು ಆಮೇಲೆ ನೋಡೋಣ ಮೊದಲು ದೇಶ ಹಾಗೂ ರಾಜ್ಯದಲ್ಲಿರುವ ರಾವಣ ರಾಜ್ಯ ಸರಿಪಡಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.
ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಬಿಟ್ಟು ಹೋದ ಘಟನೆ: ಗೋಫಸ್ಟ್‌ಗೆ ಡಿಜಿಸಿಎ ಶೋಕಾಸ್ ನೋಟಿಸ್