ಕಲಬುರಗಿ: ನಿನ್ನೆ (ಶುಕ್ರವಾರ)ಯಿಂದ ರಾಜ್ಯಾದ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರಾರಂಭಗೊಂಡಿದೆ. ಮೊದಲ ದಿನವೇ ಕಲಬುರಗಿಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಸುದ್ದಿ ಹಾಗೂ ಪರೀಕ್ಷೆಗೆ ನಕಲಿ ಅಭ್ಯರ್ಥಿ ಹಾಜರಾಗಿರುವ ಘಟನೆ ಬೆಳಕಿಗೆ ಬಂದಿದೆ.
ಹೌದು, ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟವಾದ ಎಸ್ಎಸ್‌ಎಲ್‌ಸಿ ಪರೀಕ್ಷೆಯನ್ನು ಜಿಲ್ಲೆಯಲ್ಲಿ 46,029 ವಿದ್ಯಾರ್ಥಿಗಳು ಎದುರಿಸುತ್ತಿದ್ದಾರೆ. ಇದಕ್ಕಾಗಿ ಜಿಲ್ಲೆಯಲ್ಲಿ 168 ಪರೀಕ್ಷೆ ಕೇಂದ್ರಗಳನ್ನು ತೆರೆಯಲಾಗಿದೆ. ಪರೀಕ್ಷಾ ಅಕ್ರಮ ತಡೆಗಟ್ಟುವ ದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಯಂತ್ರದಿಂದ ಮುದ್ರಿಸಲಾದ ಹಾಲ್ ಟಿಕೆಟ್, ಪರೀಕ್ಷಾ ಕೇಂದ್ರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸಿಸಿಟಿವಿ ಕಣ್ಗಾವಲು ಸೇರಿದಂತೆ ನಕಲು ತಡೆಯಲು ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ, ಇಷ್ಟೊಂದು ಜಾಗೃತಿ ನಡುವೆಯೂ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಮೊದಲನೇ ದಿನ ಕನ್ನಡ ಪರೀಕ್ಷೆ ನಡೆದಿದ್ದು, ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿ ಬದಲಾಗಿ ನಕಲಿ ಅಭ್ಯರ್ಥಿ ಹಾಜರಾಗಿ ಎಕ್ಸಾಂ ಬರೆದಿದ್ದಾನೆ.
ಕಲಬುರಗಿಯ ಅಂಬಿಕಾ ನಗರದಲ್ಲಿರುವ ವಿನಾಯಕ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಇಂತಹದೊಂದು ಪ್ರಕರಣ ನಡೆದಿದೆ. ಜಿಲ್ಲಾ ಪಂಚಾಯತ್ ಸಿಇಒ ಗಿರೀಶ ಬದೋಲೆ ಶಾಲೆಗೆ ಭೇಟಿ ನೀಡಿದಾಗ ಅನುಮಾನಗೊಂಡು ತಪಾಸಣೆ ನಡೆಸಿದಾಗ ಅಭ್ಯರ್ಥಿ ಬದಲಾಗಿ ನಕಲಿ ವಿದ್ಯಾರ್ಥಿ ಪರೀಕ್ಷೆ ಬರೆಯುತ್ತಿರುವುದು ಪತ್ತೆಯಾಗಿದೆ. ಸಿಇಒ ಸೂಚನೆ ಮೇರೆಗೆ ಪರೀಕ್ಷೆಗೆ ನೋಂದಣಿ ಮಾಡಿಕೊಂಡ ವಿದ್ಯಾರ್ಥಿ ಹಾಗೂ ಪರೀಕ್ಷೆಗೆ ಹಾಜರಾದ ನಕಲಿ ವಿದ್ಯಾರ್ಥಿ ಇಬ್ಬರ ವಿರುದ್ಧವೂ ಕಲಬುರಗಿ ನಗರದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಇನ್ನೊಂದೆಡೆ, ಮೊದಲ ದಿನವೇ ಕನ್ನಡ ಭಾಷಾ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಶಂಕೆ ವ್ಯಕ್ತವಾಗಿದೆ. ಬೆಳಗ್ಗೆ 10-30 ರಿಂದ 1-30 ರವರೆಗೆ ಪರೀಕ್ಷೆ ಸಮಯ ನಿಗಧಿ ಮಾಡಲಾಗಿತ್ತು. ಆದ್ರೆ, ಪರೀಕ್ಷೆ ಆರಂಭದ ಸಮಯದಲ್ಲಿಯೇ ಪ್ರಶ್ನೆ ಪತ್ರಿಕೆಯೊಂದು ಬಾರಿ ಸದ್ದು ಮಾಡಿ ಶರವೇಗದಲ್ಲಿ ವಾಟ್ಸಪ್ಗಳಲ್ಲಿ ಓಡಾಡತೊಡಗಿತ್ತು. ಈ ಪತ್ರಿಕೆ ವಿದ್ಯಾರ್ಥಿಗಳಿಗೆ ತಲುಪುವಷ್ಟರಲ್ಲಿ ಪರೀಕ್ಷೆ ಪ್ರಾರಂಭವಾಗಿತ್ತು. ಇದು ನಿಜವಾದ ಪ್ರಶ್ನೆ ಪತ್ರಿಕೆಯಾ ಅಥನಾ ನಕಲಿ ಪತ್ರಿಕೆಯಾ ಎಂಬ ಬಗ್ಗೆ ಅಧಿಕಾರಿಗಳು ಖಚಿತಪಡಿಸಿಲ್ಲ. ವಿದ್ಯಾರ್ಥಿಗಳಿಗೆ ಗೊಂದಲ ಸೃಷ್ಟಿಯಾಗಬಾರದು ಅನ್ನೋ ಉದ್ದೇಶಕ್ಕೆ ಪೋಷಕರು, ಅಧಿಕಾರಿಗಳು ಅಷ್ಟೊಂದು ಮಹತ್ವ ಕೊಡಲಿಲ್ಲ. ಹೀಗಾಗಿ ಸರಾಗವಾಗಿ ಪರೀಕ್ಷೆ ನಡೆಯಿತು.
ಇದನ್ನೂ ಓದಿ: ಎಸ್ಎಸ್‌ಎಲ್‌ಸಿ ಪರೀಕ್ಷೆ: ಇಂದು ಶೇ.98.48 ಹಾಜರಾತಿ, ಶೂನ್ಯ ಪರೀಕ್ಷಾ ಅಕ್ರಮ
ಇನ್ನುಳಿದಂತೆ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಮುಖಾಂತರ ಜಿಲ್ಲಾಡಳಿತ ಅಕ್ರಮ ತಡೆಯಲು ಬಿಗಿ ಬಂದೋಬಸ್ತ್ ಕೈಗೊಂಡಿದೆ. ಶುಕ್ರವಾರದಿಂದ ಆರಂಭವಾದ ಪರೀಕ್ಷೆಗಳು ಏಪ್ರಿಲ್ 15ರ ವರೆಗೆ ನಡೆಯಲಿದ್ದು, ಅಕ್ರಮ ತಡೆಗೆ ಹಾಗೂ ಸುಗಮ ಪರೀಕ್ಷೆಗಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳು ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಜೆರಾಕ್ಸ್ ಅಂಗಡಿಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸಲಾಗಿದೆ. ಜೊತೆಗೆ ಪರೀಕ್ಷಾ ಕೇಂದ್ರಕ್ಕೆ ಮೊಬೈಲ್ ಫೋನ್, ಸ್ಮಾರ್ಟ್‌ವಾಚ್, ಇಯರ್‌ಫೋನ್, ಎಲೆಕ್ಟ್ರಾನಿಕ್ಸ್ ಉಪಕರಣ ತರುವಂತಿಲ್ಲ. ಒಟ್ಟಿನಲ್ಲಿ, ಎಲ್ಲಾ ರೀತಿಯ ಎಚ್ಚರಿಕೆ ವಹಿಸಿದ್ದರೂ ಕೂಡ ಅಕ್ರಮ ನಡೆದಿರುವುದು ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರ ಆತಂಕಕ್ಕೆ ಕಾರಣವಾಗಿದೆ.