ಕಲಬುರಗಿ: ಮೈಸೂರು ಕೃಷ್ಣ ದೇವರಾಜ ಒಡೆಯರ 1936ರಲ್ಲಿಯೇ ಬಂಜಾರ ಸಮುದಾಯವನ್ನು ಎಸ್ಸಿ ಪಟ್ಟಿಗೆ ಸೇರಿಸಿದ್ದರು. ಆಗ ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಿರಲಿಲ್ಲ ಎಂಬ ಸಂಸದ ಡಾ.ಉಮೇಶ್ ಜಾಧವ್ ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆಗೆ ಗ್ರಾಸವಾಗಿದೆ.

ಸಂಸದ ಡಾ.ಉಮೇಶ್ ಜಾಧವ್ ಬಂಜಾರ ಸಮುದಾಯಕ್ಕೆ ಮೀಸಲಾತಿ ದೊರಕಿರುವ ವಿಷಯವಾಗಿ ಮಾತನಾಡಿದಕ್ಕೆ ಶಹಾಪುರ ಮೂಲದ ದಲಿತ ಮುಖಂಡ ಸಂಸದ ಜಾಧವ್ ಅವರಿಗೆ ನೇರವಾಗಿ ಕರೆಮಾಡಿ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾದ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗುತ್ತಿದೆ. ಫೇಸ್ಬುಕ್ನಲ್ಲಿ ಹಾಕಿರುವ ಪೊಸ್ಟ್ ತೆಗೆದು ಹಾಕಿ, ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ.
ನಗರದ ನಿಲಾಂಭಿಕಾ ಕಲ್ಯಾಣ ಮಂಟಪದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಉಮೇಶ್ ಜಾಧವ್ ಮೀಸಲಾತಿಯ ಕುರಿತು ಭಾಷಣದಲ್ಲಿ ಮಾತನಾಡಿದ್ದು, ಇಷ್ಟೊಂದು ಚರ್ಚೆಗೆ ಕಾರಣವಾಗಿದೆ.
1936ರಲ್ಲಿ ಇನ್ನೂ ಸಂವಿಧಾನ ರಚನೆಯಾಗಿರಲಿಲ್ಲ, ಎಸ್ಸಿ ಮೀಸಲಾತಿಯೂ ಇರಲಿಲ್ಲ. ಹೀಗಿರುವಾಗ ಬಂಜಾರ ಸಮುದಾಯವನ್ನು ಎಸ್ಸಿ ಪಟ್ಟಿಗೆ ಹೇಗೆ ಸೇರಿಸಿದರು. ಇದೆಲ್ಲ ಸುಳ್ಳು. ಸಂವಿಧಾನ ರಚನೆ ನಂತರ ಎಸ್ಸಿ ಮೀಸಲಾತಿ ಲಾಭ ಸಿಗುವುದಕ್ಕಾಗಿ ಬಂಜಾರ ಸಮುದಾಯವನ್ನು ಎಸ್ಸಿ ಪಟ್ಟಿಗೆ ಸೇರಿಸಲಾಗಿದೆ. ಸಂಸದ ಜಾಧವ ಅವರು ಜನರ ದಾರಿ ತಪ್ಪಿಸುತ್ತಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಕಿಡಿಕಾರಿದ್ದಾರೆ.