ಕಲಬುರಗಿ : ದಾಲಮಿಲ್ ನಲ್ಲಿ ಅಕ್ರಮ ಗುಟಕಾ ತಯಾರಿಸುತ್ತಿದ್ದ ಘಟಕದ ಮೇಲೆ ಸಬ್ ಅರ್ಬನ್ ಪೊಲೀಸರು ದಾಳಿ ನಡೆಸಿ ಅಪಾರ ಪ್ರಮಾಣದ ಗುಟಕಾ ಸಾಮಗ್ರಿ ಹಾಗೂ 19 ಯುವಕrನ್ನು ವಶಕ್ಕೆ ಪಡೆದಿದ್ದಾರೆ. ಕಲಬುರಗಿ ಹೊರವಲಯದ ಕಪನೂರ ಇಂಡಸ್ಟ್ರಿಯಲ್ ಏರಿಯಾದ ದಾಲಮಿಲ್ ವೊಂದರಲ್ಲಿ ಅಕ್ರಮ ಮಾಣಿಕಚಂದ್ ಗುಟ್ಕಾ ತಯಾರಿಸಿ ಹೊರರಾಜ್ಯಕ್ಕೆ ರವಾನಿಸಲಾಗುತ್ತಿದೆ ಎಂಬ ಮಾಹಿತಿ ಸಂಗ್ರಹಿಸಿದ ಪೊಲೀಸರು ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳ ಜೊತೆ ಸೇರಿ ದಿಢೀರ್ ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ, ಮಧ್ಯ ಪ್ರದೇಶ, ಬಿಹಾರ್ ಮೂಲದ 19 ಯುವಕರನ್ನು ಹಾಗೂ 1 ಗೂಡ್ಸ್ ವಾಹನ, 20 ಲಕ್ಷ ಮೌಲ್ಯದ ಮಾಣಿಕಚಂದ್ ಗುಟಕಾ ತಯಾರಿಕಾ ಸಾಮಗ್ರಿ ಹಾಗೂ ತಯಾರಿಕೆ ಮಷೀನ್‌ಗಳು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಕ್ರಮ ತಯಾರಿಕಾ ಘಟಕ ಬೀದರ್ ಜಿಲ್ಲೆ ಭಾಲ್ಕಿ ತಾಲೂಕು ಮಾತಂಬರ್ ಗ್ರಾಮದ ನಿವಾಸಿ ಗುಲಾಮ್ ಅಹ್ಮದ್ ಅವರಿಗೆ ಸೇರಿದ್ದಾಗಿದೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು, ಈ ಕುರಿತು ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಕಲಂ 269, 270, 285, 336, 420, 468, 476 ಜೊತೆಗೆ ಐಪಿಸಿ 149 ಮತ್ತು 7 ಕೊಪ್ಟಾ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದೆ.
ತರಕಾರಿ ವ್ಯಾಪಾರಿ ಮನೆ ಬೀಗ ಮುರಿದು ಕಳ್ಳತನ : ಮನೆ ಬೀಗ ಮುರಿದು ನಗನಾಣ್ಯ ದೋಚಿಕೊಂಡು ಹೋಗಿರುವ ಘಟನೆ ಕರೀಮ್ ನಗರದಲ್ಲಿ ನಡೆದಿದೆ. ತರಕಾರಿ ವ್ಯಾಪಾರಿಯಾಗಿರುವ ಶಬ್ಬೀರ್ ಶೇಖ್ ಎಂಬುವವರ ಮನೆ ಬೀಗ ಮುರಿದು 25 ಸಾವಿರ ರೂ. ಮೌಲ್ಯದ 5 ಗ್ರಾಂ ಬಂಗಾರದ ಉಂಗುರ, 15 ಸಾವಿರ ರೂ. ನಗದು ಸೇರಿ 40 ಸಾವಿರ ರೂ.ಮೌಲ್ಯದ ನಗನಾಣ್ಯ ಕಳವು ಮಾಡಲಾಗಿದೆ. ಶಬ್ಬೀರ್ ಶೇಖ್ ಅವರು ಮನೆಗೆ ಬೀಗ ಹಾಕಿಕೊಂಡು ಪತ್ನಿ ಜೊತೆಗೆ ಅಳಿಯನ ಮದುವೆಗೆ ಹೋದ ವೇಳೆ ಕಳ್ಳರು ಮನೆ ಬೀಗ ಮುರಿದು ಕಳ್ಳತನ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಆಹಾರ ಉತ್ಪನ್ನಗಳ ಮರು ಪ್ಯಾಕಿಂಗ್ ಗೋದಾಮಿಗೆ ದಾಳಿ : ಜುಲೈ 1 ರಂದು ರಾಜ್ಯ ರಾಜಧಾನಿಯಲ್ಲಿ ಬಳಕೆಯ ಅವಧಿ ಮುಗಿದ ಆಹಾರ ಉತ್ಪನ್ನಗಳನ್ನು ಮರು ಪ್ಯಾಕಿಂಗ್ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದ ಗೋದಾಮಿನ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಆಹಾರ ಸುರಕ್ಷತಾ ಅಧಿಕಾರಿಗಳು ಹಾಗೂ ಸಿಸಿಬಿ ಪೊಲೀಸರು ಜಂಟಿ ಆಗಿ ನಡೆಸಿದ ಕಾರ್ಯಾಚರಣೆಯಲ್ಲಿ ಕಾಟನ್ ಪೇಟೆಯ ಖಾಸಗಿ ಟ್ರೇಡಿಂಗ್ ಕಂಪನಿಯ ಗೋದಾಮಿನಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಷ್ಠಿತ ಬ್ರ್ಯಾಂಡ್ಗಳಿಗೆ ಸೇರಿದ, ಬಳಕೆಯ ಅವಧಿ ಮೀರಿದ ಬಿಸ್ಕೆಟ್ಸ್, ಚಾಕೊಲೇಟ್, ಚಾಕೊಲೇಟ್ ಪೌಡರ್, ಅಡುಗೆ ಎಣ್ಣೆ, ಡಾಲ್ಡಾ, ರವೆ ಸೇರಿದಂತೆ ಅನೇಕ ಉತ್ಪನ್ನಗಳನ್ನು ದಾಳಿ ವೇಳೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ : ಹುಬ್ಬಳ್ಳಿಯಲ್ಲಿ ಸಿಸಿ ಕ್ಯಾಮರಾ ಒಡೆದು ಕಳ್ಳತನಕ್ಕೆ ಯತ್ನಿಸಿದ್ದ ಖದೀಮ: ಜನರ ಕೈಗೆ ಸಿಕ್ಕಿಬಿದ್ದ ಆರೋಪಿ ಪೊಲೀಸರ ವಶಕ್ಕೆ