ಕಲಬುರಗಿ: ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್ ಮಾಧ್ಯಮ ಶಾಲೆ ತೆರೆಯಲು ಹಾಗೂ ಎಲ್ಕೆಜಿ, ಯುಕೆಜಿ ಪ್ರಾರಂಭಿಸಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸಿಪಿಐಎಂ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್ವಾದಿ ಕಾರ್ಯಕರ್ತರು, ರಾಜ್ಯ ಸರ್ಕಾರದ ಧೋರಣೆಗೆ ಸಿಡಿಮಿಡಿಗೊಂಡರು.
ಪ್ರತಿ ವರ್ಷ ಕನ್ನಡ ಸಾಹಿತ್ಯ ಸಮ್ಮೇಳನದ ವೇಳೆ ಸಾಹಿತಿಗಳು ಕನ್ನಡಕ್ಕೆ ಪ್ರೋತ್ಸಾಹ ನೀಡುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸುತ್ತಾರೆ. ಆದರೆ ರಾಜ್ಯ ಸರ್ಕಾರ ಕನ್ನಡ ಪ್ರೋತ್ಸಾಹಿಸುವ ಬದಲಾಗಿ ತುಳಿಯುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಭಾಷಾತಜ್ಞರು, ಸಂಘಟನೆಗಾರರು, ಸಾಹಿತಿಗಳು ಸೇರಿದಂತೆ ಯಾರೊಂದಿಗೂ ಚರ್ಚಿಸದೇ ಏಕಪಕ್ಷೀಯವಾಗಿ ಆಂಗ್ಲ ಮಾಧ್ಯಮ ಶಾಲೆ ತೆರೆಯಲು ಮುಂದಾಗಿರುವುದು ಸರಿಯಲ್ಲ. ಪ್ರಾಥಮಿಕ ಹಂತದಿಂದ ಆಂಗ್ಲ ಮಾಧ್ಯಮ ಪ್ರಾಯೋಗಿಕ ಶಾಲೆ ಪ್ರಾರಂಭಿಸಲು ಮುಂದಾಗಿರುವ ರಾಜ್ಯ ಸರ್ಕಾರ ತನ್ನ ಧೋರಣೆ ಕೈಬಿಡಬೇಕು ಎಂದು ಆಗ್ರಹಿಸಿದ ಕಾರ್ಯಕರ್ತರು, ಸರ್ಕಾರ ತನ್ನ ಸುತ್ತೋಲೆಯನ್ನ ಮತ್ತೊಮ್ಮೆ ಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ.
ಇನ್ನು, ಸರ್ಕಾರ ತಮ್ಮ ಬೇಡಿಕೆಗೆ ಸ್ಪಂಧಿಸದಿದ್ರೆ ಉಗ್ರ ಸ್ವರೂಪದ ಚಳವಳಿಯನ್ನು ಸರ್ಕಾರ ಎದುರಿಸಬೇಕಾಗಲಿದೆ ಎಂದು ಸಿಪಿಐಎಂ ಮುಖಂಡ ಮಾರುತಿ ಮಾನ್ಪಡೆ ಎಚ್ಚರಿಕೆ ರವಾನಿಸಿದರು.